ರಾಯಚೂರು : ರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜ್ಯದಲ್ಲಿಯೇ ಬೀಡು ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಹೆಲಿಪ್ಯಾಡ್ ಗಳ ದುರಂತಗಳು ನಡೆಯುತ್ತಲೇ ಇವೆ. ಸದ್ಯ ಮೋದಿ ಭದ್ರತೆಗಾಗಿ ಬಂದಿದ್ದ ಸೇನಾ ಹೆಲಿಕಾಪ್ಟರ್ ಕೆಸರಿನ ಗದ್ದೆಯಲ್ಲಿ ಸಿಲುಕಿಕೊಂಡ ಘಟನೆ ರಾಯಚೂರಿನಲ್ಲಿ (Raichuru) ನಡೆದಿದೆ.
ಸಿಂಧನೂರಿನ ಹೊಸಳ್ಳಿ ಕ್ಯಾಂಪ್ನ ಹೆಲಿಪ್ಯಾಡ್ನಲ್ಲಿ ಈ ಘಟನೆ ನಡೆದಿದೆ. ಮೋದಿ ಭದ್ರತೆಗೆ ಬಂದಿದ್ದ 3ನೇ ಹೆಲಿಕಾಪ್ಟರ್ ಕೆಸರಿನ ಗದ್ದೆಯಲ್ಲಿ ಸಿಲುಕಿಕೊಂಡಿತ್ತು. ಮಳೆಯಿಂದಾಗಿ ಹೆಲಿಪ್ಯಾಡ್ ಸಂಪೂರ್ಣ ಜಲಾವೃತವಾಗಿತ್ತು. ಅವಸರದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿತ್ತು. ಹೀಗಾಗಿ ಕೇಸರಿನಲ್ಲಿ ಹೆಲಿಕಾಪ್ಟರ್ ಸಿಲುಕಿ ಪಜೀತಿ ಅನುಭವಿಸಿತು.
ಹೆಲಿಕ್ಯಾಪ್ಟರ್ ಮೇಲೆತ್ತಲು ಸಿಬ್ಬಂದಿ ಹರಸಾಹಸಪಟ್ಟರು. ನಂತರ ಜೆಸಿಬಿ ಮೂಲಕ ಹೆಲಿಕಾಪ್ಟರ್ ಮೇಲೆತ್ತುವ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಭದ್ರತಾ ಸಿಬ್ಬಂದಿ ಸಹ ಅಲ್ಲೇ ಸಿಲುಕಿಕೊಂಡಿದ್ದರು.
ಮತ್ತೆರಡು ಹೆಲಿಕಾಪ್ಟರ್ಗಳು ಸ್ಥಳಕ್ಕೆ ಆಗಮಿಸಿ ಭದ್ರತಾ ಸಿಬ್ಬಂದಿಯನ್ನು ಕರೆದುಕೊಂಡು ಹೋದವು. ಈ ಸಂದರ್ಭದಲ್ಲಿ ಮೋದಿ ಅವರು ಬಂದಿದ್ದ ಹೆಲಿಕಾಪ್ಟರ್, ಕಾರ್ಯಕ್ರಮದ ಸಂದರ್ಭದಲ್ಲಿ ವೇದಿಕೆ ಸುತ್ತ ಸುತ್ತು ಹಾಕಿತು. ಇನ್ನೆರಡು ಹೆಲಿಕಾಪ್ಟರ್ ಹಾರಾಟ ನಡೆಸುವವರೆಗೂ ಇದು ಸುತ್ತು ಹಾಕಿತ್ತು.








