ಬೆಂಗಳೂರು: ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಭಜರಂಗ ದಳ ನಿಷೇಧ ಕುರಿತು ಪ್ರಸ್ತಾಪ ಇರುವ ಹಿನ್ನೆಲೆಯಲ್ಲಿ ತಿರುಗಿ ಬಿದ್ದಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಗುರುವಾರ ಸಂಜೆ 7ರಿಂದ ರಾಜ್ಯಾದ್ಯಂತ ರಾಮ, ಆಂಜನೇಯ ದೇವಸ್ಥಾನಗಳಲ್ಲಿ ‘ಹನುಮಾನ್ ಚಾಲೀಸಾ’ ಪಠಣ ಅಭಿಯಾನ ಆರಂಭಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ವಿಭಾಗದ ಸಂಯೋಜಕ ಗೋವರ್ಧನ್, ಎಲ್ಲ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ‘ಹನುಮಾನ್ ಚಾಲೀಸಾ’ ಪಠಣದ ಮೂಲಕ ಬಜರಂಗಿಗಳ ಒಗ್ಗಟ್ಟನ್ನು ಸಾರುತ್ತೇವೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಘಟನೆಯನ್ನು ನಿಷೇಧಿಸುವುದಾಗಿ ಹೇಳಿದೆ. ಆದರೆ, ನಾವು ಅವರನ್ನು ಅಧಿಕಾರಕ್ಕೆ ಬರದಂತೆ ತಡೆಯಲು ಹಿಂದೂಗಳಲ್ಲಿ ಜನಜಾಗೃತಿ ಮೂಡಿಸುತ್ತೇವೆ. ಹಿಂದೂ ವಿರೋಧಿ ಕಾಂಗ್ರೆಸ್ಗೆ ಮೇ 13ರಂದು ರಾಜ್ಯದ ಜನತೆ ತಕ್ಕ ಉತ್ತರವನ್ನು ನೀಡಲಿದ್ದಾರೆ. ಕಾಂಗ್ರೆಸ್ ಮುಖಂಡರು ತಕ್ಷಣ ತಮ್ಮ ಪ್ರಣಾಳಿಕೆ ಹಿಂಪಡೆದು ಕ್ಷಮೆ ಕೋರಬೇಕು. ಇಲ್ಲವೇ ತಾಕತ್ತಿದ್ದರೆ ತಾವು ಕೈಗೊಳ್ಳುವ ಎಲ್ಲ ಚುನಾವಣಾ ಭಾಷಣದಲ್ಲಿ ಬಹಿರಂಗವಾಗಿ ‘ಬಜರಂಗ ದಳ ನಿಷೇಧಿಸುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಯಲಹಂಕ, ಬನ್ನೇರುಘಟ್ಟ, ವಿಜಯನಗರ, ಬಸವನಗುಡಿ ಸೇರಿ ಸುಮಾರು 15ಕ್ಕೂ ಹೆಚ್ಚಿನ ರಾಮ- ಆಂಜನೇಯ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಪಠಣ ನಡೆಯಲಿದೆ.








