ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಕಳೆದ ಎರಡು ದಿನಗಳಿಂದ ಮಳೆ (Bengaluru Rains) ಸುರಿಯುತ್ತಿದ್ದು, ಮೇ 6ರ ವರೆಗೆ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಂಗಳವಾರ ಮುನ್ಸೂಚನೆ ನೀಡಿದೆ.
ನಗರದ ರಿಚ್ಮಂಡ್ ರಸ್ತೆ, ಕಾರ್ಪೊರೇಷನ್ ವೃತ್ತ, ನಂಜಪ್ಪ ಸರ್ಕಲ್ ಸೇರಿದಂತೆ ಹಲವು ಕಡೆಗಳಲ್ಲಿ ಮಳೆಯಾಗಿದ್ದು, ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ. ಫ್ಲೈಓವರ್, ಸ್ಕೈವಾಕ್ ಕೆಳಗೆ ಬೈಕ್ ನಿಲ್ಲಿಸಿ ಸವಾರರು ಆಶ್ರಯ ಪಡೆದಿದ್ದಾರೆ.
ಶಾಂತಿನಗರ, ಮೆಜೆಸ್ಟಿಕ್, ರಾಜಾಜಿನಗರ, ಜಯನಗರ, ವಿಜಯನಗರ, ಚಂದ್ರಲೇಔಟ್, ನಂದಿನಿ ಲೇಔಟ್, ಬಸವೇಶ್ವರ ನಗರ, ಕಾಮಾಕ್ಷಿಪಾಳ್ಯ, ನಾಗರಬಾವಿ, ಬನಶಂಕರಿ, ಬಸವನಗುಡಿ, ಶ್ರೀನಗರ, ಗಿರಿನಗರ, ಹೆಬ್ಬಾಳ, ಆರ್.ಟಿ ನಗರ, ಜಯನಗರ, ಮತ್ತಿಕೆರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭರ್ಜರಿ ಮಳೆಯಾಗಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ.
ಚಂಡಮಾರುತ ಮೋಚಾ ಈ ವಾರ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಇದರಿಂದ ನಗರದ ವಾತಾವರಣದ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.








