ಬೆಂಗಳೂರು : ಸದ್ಯದ ದಿನಮಾನಗಳಲ್ಲಿ ಪಾಲಕರು ಮಗುವನ್ನು ಬೇಗನೇ ಶಾಲೆಗೆ ಕಳುಹಿಸಬೇಕು ಎಂದು ಹಂಬಲಿಸುತ್ತಿರುತ್ತಾರೆ. ಅದು ಮಗುವಿನ ಚುಟಿತನಕ್ಕೋ ಅಥವಾ ಮಗು ಬೇಗ ಶಾಲೆ ಸೇರಿ ಜ್ಞಾನ ಸಂಪಾದಿಸಲು ಆರಂಭಿಸಲಿ ಎಂಬ ಕಾರಣಕ್ಕೋ ಗೊತ್ತಿಲ್ಲ. ಹಾಲುಗಲ್ಲದ ಮಗು ಒಟ್ಟಾರೆ ಅವರಿಗೆ ಬೇಗ ಶಾಲೆಗೆ ಹೋಗಬೇಕು. ಹೀಗಾಗಿಯೇ ಸರ್ಕಾರ ಎಲ್ ಕೆಜಿ ಸೇರಿಸುವುದಕ್ಕೂ ವಯಸ್ಸಿನ ಮಿತಿ ತಂದಿದೆ.
ಈಗಾಗಲೇ ಮೊದಲನೇ ತರಗತಿಗೆ ಮಕ್ಕಳನ್ನು ಸೇರಿಸಲು 6 ವರ್ಷಗಳು ಕಡ್ಡಾಯವಾಗಿರಬೇಕು ಎಂಬ ನಿಯಮ ಜಾರಿಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಎಲ್ ಕೆಜಿ ಸೇರಿಸಲು 4 ವರ್ಷಗಳನ್ನು ಕಡ್ಡಾಯಗೊಳಿಸಿದೆ. ಬರುವ ಜೂನ್ 1ಕ್ಕೆ ಕಡ್ಡಾಯವಾಗಿ ಮಗುವಿಗೆ 4 ವರ್ಷ ತುಂಬಿರಬೇಕು ಎಂದು ಶಿಕ್ಷಣ ಇಲಾಖೆ ತನ್ನ ಆದಾಯದಲ್ಲಿ ತಿಳಿಸಿದೆ.
ಈ ಸಾಲಿನಿಂದ ಎಲ್‌ಕೆಜಿಗೆ ದಾಖಲಾಗುವ ಮಕ್ಕಳು 2025-26ಕ್ಕೆ 1ನೇ ತರಗತಿಗೆ ದಾಖಲಾಗಲಿದ್ದಾರೆ. ಹೀಗಾಗಿ ಮಕ್ಕಳ ದಾಖಲಾತಿಗೆ ವಯಸ್ಸಿನ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರವೇಶಕ್ಕೂ ಇಲಾಖೆ ವಯೋಮಿತಿ ನಿಗದಿಪಡಿಸಿದೆ.
2025-26ನೇ ಸಾಲಿನಿಂದ 1ನೇ ತರಗತಿ ದಾಖಲಾತಿಗೆ ಮಗುವಿಗೆ 6 ವರ್ಷ ತುಂಬಿರಬೇಕೆಂಬ ನಿಯಮವಿದೆ. ಈ ಮೂಲಕ ಸಾಲಿನಿಂದ ಎಲ್ ಕೆಜಿಗೆ ಮಕ್ಕಳನ್ನು ದಾಖಲಿಸುವ ಪೋಷಕರು 4 ವರ್ಷ ವಯಸ್ಸು ಪೂರ್ಣಗೊಂಡಿರುವ ಮಕ್ಕಳನ್ನು ಮಾತ್ರ ಎಲ್ ಕೆಜಿಗೆ ದಾಖಲಿಸಬೇಕು.
ಹೀಗಾದಾಗ ಮಾತ್ರ 1ನೇ ತರಗತಿಗೆ ಪ್ರವೇಶ ಪಡೆಯುವಾಗ ಅವರಿಗೆ 6 ವರ್ಷ ಪೂರ್ಣಗೊಳ್ಳಲಿದೆ. ಎಲ್ ಕೆಜಿ, ಯುಕೆಜಿ ಮುಗಿಸಿದ್ದರೂ ವಯಸ್ಸು 6 ವರ್ಷ ಪೂರ್ಣಗೊಳ್ಳದ ಕಾರಣಕ್ಕೆ ಒಂದನೇ ತರಗತಿಗೆ ಪ್ರವೇಶ ದೊರೆಯುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.








