ಇಡೀ ರಾಜ್ಯವೇ ಸಾರ್ವತ್ರಿಕ ಚುನಾವಣೆಯಲ್ಲಿ ಮಿಂದೇಳುತ್ತಿದೆ. ಈ ಸಂದರ್ಭದಲ್ಲಿ ಹಣ, ಹೆಂಡದ ಹೊಳೆಯೇ ಹರಿಯುತ್ತಿದ್ದು, ತಪಾಸಣೆ ಸಂದರ್ಭದಲ್ಲಿ ನಗದು ಸೇರಿದಂತೆ ಚಿನ್ನಾಭರಣ ಸಿಕ್ಕಿರುವುದೇ ಸಾಕ್ಷಿಯಾದರೆ, ಈಗ ಹೆಂಡಕ್ಕೆ ಬೇಡಿಕೆ ಹೆಚ್ಚಾಗಿರುವುದು ರಾಜಕೀಯ ಚಿತ್ರಣವನ್ನು ತೋರಿಸುತ್ತಿದೆ.
ಕಳೆದ ವರ್ಷ ಇದೇ ಸಮಯದಲ್ಲಿ ಮಾರಾಟವಾದ ಎಣ್ಣೆ ಪ್ರಮಾಣ ನೋಡಿದರೆ, 2.5 ಪಟ್ಟು ಹೆಚ್ಚಳವಾಗಿದೆ. ಕಳೆದ ವರ್ಷದ ಮೇ 1 ರಿಂದ 4ರ ವರೆಗೆ 2.37 ಲಕ್ಷ ಬಾಕ್ಸ್ (ಪ್ರತಿ ಬಾಕ್ಸ್ನಲ್ಲಿ 7.8 ಲೀಟರ್) ಬಿಯರ್ ಮಾರಾಟವಾಗಿದ್ದರೆ, ಪ್ರಸಕ್ತ ವರ್ಷ ಇದೇ ಅವಧಿಯಲ್ಲಿ 5.44 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿವೆ. ಬಿಯರ್ 18.48 ಲಕ್ಷ ಲೀಟರ್ಗೆ ಬದಲಾಗಿ 42.43 ಲಕ್ಷ ಲೀಟರ್ ಮಾರಾಟವಾಗಿದೆ. ವಿಸ್ಕಿ ಮತ್ತಿತರ ಮದ್ಯ 2022ರ ಮೇ ಮೊದಲ ವಾರದಲ್ಲಿ 32.83 ಲಕ್ಷ ಲೀಟರ್ ಮಾರಾಟವಾಗಿತ್ತು. ಈಗ 77.58 ಲಕ್ಷ ಲೀಟರ್ ಮಾರಾಟವಾಗಿದೆ. ಇನ್ನುಳಿದಂತೆ ವಿಸ್ಕಿ, ಬ್ರಾಂಡಿ ಸೇರಿದಂತೆ ಎಲ್ಲ ರೀತಿ ಮದ್ಯ ನಿರೀಕ್ಷೆಗೂ ಮೀರಿ ಮಾರಾಟವಾಗಿದೆ.
ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಹಲವಾರು ಬಾರ್, ಹೋಲ್ ಸೇಲ್ ಮಾರಾಟದ ಅಂಗಡಿಗಳಲ್ಲಿ ಸ್ಟಾಕ್ ಇಲ್ಲದೇ ಪರದಾಟ ಕೂಡ ನಡೆಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕೂಡ ಮದ್ಯ ಖರೀದಿಗೆ ಜನರು ಮುಗಿ ಬೀಳುತ್ತಿದ್ದು, ಕಡಿಮೆ ದರದ ಮದ್ಯ ಬಂದಷ್ಟೇ ವೇಗವಾಗಿ ಮಾರಟವಾಗುತ್ತಿದೆ.
ಮಾದರಿ ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿ ಇರುವುದರಿಂದಾಗಿ ಮಾಲೀಕರು ಹೆಚ್ಚಿನ ಮದ್ಯಕ್ಕೆ ಬೇಡಿಕೆ ಸಲ್ಲಿಸಿದರೂ ಕಳೆದ ವರ್ಷದ ಮಾರಾಟ ಪರಿಗಣಿಸಿ ಶೇ.20ರಷ್ಟು ಹೆಚ್ಚುವರಿ ಸ್ಟಾಕ್ ಗೆ ಮಾತ್ರ ಅಬಕಾರಿ ಇಲಾಖೆ ಅನುಮತಿ ನೀಡುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ ಹಲವೆಡೆ ಮದ್ಯದ ಸ್ಟಾಕ್ ಖಾಲಿಯಾಗುತ್ತಿದೆ. ರಾಜ್ಯದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ.








