ಬೆಂಗಳೂರು : ರಾಜ್ಯದಲ್ಲಿ ಚುನಾವಣೆಗೆ ಈಗ ಕ್ಷಣಗಣನೆ ಆರಂಭವಾಗಿದೆ. ಹೀಗಾಗಿ ಎಲ್ಲ ಪಕ್ಷಗಳ ರಾಷ್ಟ್ರೀಯ ನಾಯಕರು ರಾಜ್ಯದಲ್ಲಿಯೇ ಬೀಡು ಬಿಟ್ಟಿದ್ದಾರೆ. ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಬೆಂಗಳೂರಿನ ಬಿಎಂಟಿಸಿ ಬಸ್‍ನಲ್ಲಿ (BMTC Bus) ಸಂಚರಿಸಿ, ಪ್ರಯಾಣಿಕರೊಂದಿಗೆ ಸಂವಾದ ನಡೆಸಿದ್ದಾರೆ.
ಸೋಮವಾರ ಬೆಳಗ್ಗೆ ರಾಹುಲ್ ಗಾಂಧಿ ಅವರು ಬಿಎಂಟಿಸಿ ಬಸ್ ನಲ್ಲಿ ಸಾಮಾನ್ಯ ಪ್ರಜೆಯಂತೆ ಸಂಚರಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕನ್ನಿಂಗ್ ಹ್ಯಾಮ್ ರಸ್ತೆಯಿಂದ ರಾಮಮೂರ್ತಿ ನಗರ ಕಡೆಗೆ ತೆರಳುತ್ತಿದ್ದ ಬಸ್ ನಲ್ಲಿ ರಾಹುಲ್ ಗಾಂಧಿ ಅವರು ಪ್ರಯಾಣ ಬೆಳೆಸಿದ್ದಾರೆ. ಈ ಸಂದರ್ಭದಲ್ಲಿ ಪ್ರಯಾಣಿಸುತ್ತಲೇ ಸಂವಾದ ನಡೆಸಿದ್ದಾರೆ. 6 ಕಿಮೀಗೂ ಹೆಚ್ಚು ದೂರ ಬಸ್‍ನಲ್ಲೇ ಪ್ರಯಾಣ ಬೆಳೆಸಿದ್ದಾರೆ.
ಭಾನುವಾರವಷ್ಟೇ ರಾಹುಲ್ ಗಾಂಧಿ, ಫುಡ್ ಡೆಲಿವರಿ ಬಾಯ್ ಜೊತೆ ಬೆಂಗಳೂರಿನಲ್ಲಿ (Bengaluru) ಸಂಚಾರಿಸಿದ್ದರು. ನಂತರ ಡೆಲಿವರಿ ಬಾಯ್ ಜೊತೆ ಹೋಟೆಲ್ ನಲ್ಲಿ ಸಂವಾದ ನಡೆಸಿದ್ದರು.








