ಬೆಂಗಳೂರು : ರಾಜ್ಯ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿದ ಬಿ.ಕೆ. ಹರಿಪ್ರಸಾದ್ ಮತ್ತು ನಾಸೀರ್ ಅಹ್ಮದ್ ಪಕ್ಷದ ಬಿ ಫಾರಂ ಪಡೆದುಕೊಂಡಿದ್ದಾರೆ. ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಧಾನ ಪರಿಷತ್ ಅಭ್ಯರ್ಥಿಗಳಿಗೆ ಬಿ ಫಾರ್ಮ್ ನೀಡಿದರು.
ಬಿ ಫಾರಂ ನೀಡುವ ಸಮಯದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಇದ್ದರು .
ಬಿ ಫಾರಂ ಪಡೆದ ಬಳಿಕ ವಿಧಾನಸೌಧಕ್ಕೆ ಬಂದ ಬಿ.ಕೆ. ಹರಿಪ್ರಸಾದ್ ಮತ್ತು ನಾಸೀರ್ ಅಹ್ಮದ್ ನಾಮಪತ್ರ ಸಲ್ಲಿದರು. ನಾಮ ಪತ್ರ ಸಲ್ಲಿಕೆ ವೇಳೆಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಮಾಜಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಮಾಜಿ ಸಚಿವರಾದ ರಾಮಲಿಂಗಾ ರೆಡ್ಡಿಯವರು ಹಾಜರಿದ್ದರು.









