ರಾಜ್ಯದಲ್ಲಿನ ಹಳ್ಳಿಯ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯದ ಪ್ರತಿ ಪಂಚಾಯಿತಿ ಮಟ್ಟದಲ್ಲಿಯೂ ನವೋದಯ ಮಾದರಿ ಉನ್ನತ ಗುಣಮಟ್ಟದ ಶಾಲೆಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ತಾವು ಓದಿದ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳ್ಳಿಯಿಂದ ಶಿಕ್ಷಣಕ್ಕಾಗಿ ಮಕ್ಕಳು ನಗರಕ್ಕೆ ವಲಸೆ ಬರುತ್ತಿದ್ದಾರೆ. ಹೀಗಾಗಿ ಇದನ್ನು ತಡೆಯಲು ಪ್ರತಿ ಪಂಚಾಯಿತಿ ಮಟ್ಟದಲ್ಲಿ ನವೋದಯ ಮಾದರಿ ಉನ್ನತ ಗುಣಮಟ್ಟದ ಶಾಲೆ ಆರಂಭಿಸಲಾಗುವುದು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರತಿ ಪಂಚಾಯಿತಿಯಲ್ಲಿ ನವೋದಯ ಮಾದರಿ ಶಾಲೆ ಆರಂಭಿಸುವ ಪ್ರಸ್ತಾಪವಿದ್ದು, ಈ ಯೋಜನೆಯನ್ನು ಯಾವ ರೀತಿ ಕಾರ್ಯರೂಪಕ್ಕೆ ತರಬೇಕು ಎಂಬ ಕುರಿತು ಗುರುಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಹಳ್ಳಿಯ ಜನರಿಗೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕೆಂಬ ಹಂಬಲವಿದ್ದು, ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ನಾವು ಕೆಲಸವನ್ನು ಮುಂದುವರೆಸಿ, ಯೋಜನೆ ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ.








