ಸಚಿನ್ ತೆಂಡುಲ್ಕರ್ ಉತ್ತಮ ನಾಯಕನಲ್ಲ… ಹಾಗಂತ ಮದನ್ ಲಾಲ್ ಹೇಳ್ತಾ ಇಲ್ಲ..!
ಸಚಿನ್ ತೆಂಡುಲ್ಕರ್, ವಿಶ್ವ ಕ್ರಿಕೆಟ್‍ನಲ್ಲಿ ಗಾಡ್ ಆಫ್ ಕ್ರಿಕೆಟ್ ಅಂತ ಕರೆಯುತ್ತಾರೆ. ಯಾಕಂದ್ರೆ ತೆಂಡುಲ್ಕರ್ ತನ್ನ 24 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಾಡಿರುವ ಸಾಧನೆ ಆ ಮಟ್ಟದಲ್ಲಿದೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ದಾಖಲಿಸಿದ್ದಾರೆ. ಹಾಗೇ ನೂರು ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ.
ಅಷ್ಟೇ ಅಲ್ಲ, ಸಚಿನ್ ಕ್ರಿಕೆಟ್ ಆಡುತ್ತಿರುವಷ್ಟು ದಿನವೂ ಪ್ರತಿಯೊಬ್ಬರ ನಾಲಗೆಯ ಮೇಲೆ ಸಚಿನ್ ಹೆಸರು ನಲಿದಾಡುತ್ತಿತ್ತು. ಇನ್ನು ಕೈಯಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದಾಗಂತೂ ಸಚಿನ್ ಸಚಿನ್ ಸಚಿನ್ ಅನ್ನೋ ಮೂರು ಅಕ್ಷರದ ಪದಗಳು ಮೈದಾನದಲ್ಲಿ ಪ್ರತಿಧ್ವನಿಸುತ್ತಿತ್ತು. ಅಷ್ಟರ ಮಟ್ಟಿಗೆ ಸಚಿನ್ ಕ್ರಿಕೆಟ್ ಅಭಿಮಾನಿಗಳನ್ನು ಸಮ್ಮೋಹನಗೊಳಿಸಿದ್ದರು.
ಆದ್ರೆ ಸಚಿನ್ ತೆಂಡುಲ್ಕರ್ ನಾಯಕನಾಗಿ ಮಾತ್ರ ವೈಫಲ್ಯ ಅನುಭವಿಸಿದ್ದಾರೆ. ಯಾಕೋ ಏನು ಸಚಿನ್ ನಾಯಕತ್ವದ ಕಲೆಯನ್ನು ಅರಿತುಕೊಳ್ಳಲು ಸಾಧ್ಯವಾಗಲಿಲ್ಲ. ಒಬ್ಬ ವಿಶ್ವದ ಶ್ರೇಷ್ಠ ಆಟಗಾರನಾಗಿದ್ದ ಸಚಿನ್, ತಂಡವನ್ನು ಯಶಸ್ವಿಯಾಗಿ ಯಾಕೆ ಮುನ್ನೆಡೆಸಲು ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಹಾಗೂ ಆಟಗಾರ ಮದನ್ ಲಾಲ್ ಉತ್ತರ ನೀಡುತ್ತಾರೆ.
ನಾನು ಸಚಿನ್ ಉತ್ತಮ ನಾಯಕನಲ್ಲ ಎಂದು ಹೇಳುತ್ತಿಲ್ಲ. ಆದ್ರೆ ಸಮಸ್ಯೆ ಮಾತ್ರ ಅವರಲ್ಲೇ ಇತ್ತು. ಸಚಿನ್ ತಾನು ಚೆನ್ನಾಗಿ ಪ್ರದರ್ಶನ ನೀಡಬೇಕು. ಉತ್ತಮ ಮಟ್ಟದ ಆಟವನ್ನಾಡಬೇಕು ಎಂಬುದರ ಬಗ್ಗೆ ಜಾಸ್ತಿ ಯೋಚನೆ ಮಾಡುತ್ತಿದ್ದರು. ತನ್ನ ಆಟದ ಬಗ್ಗೆನೇ ತುಂಬಾ ಕಾಳಜಿ ಕೂಡ ವಹಿಸುತ್ತಿದ್ದರು. ಹೀಗಾಗಿ ಅವರಿಗೆ ತಂಡವನ್ನು ಮುನ್ನಡೆಸಲು ಅವರಿಗೆ ಕಷ್ಟಕರವಾಗುತ್ತಿತ್ತು ಎಂದು ಮದನ್ ಲಾಲ್ ಅಭಿಪ್ರಾಯಪಟ್ಟಿದ್ದಾರೆ.
ಒಬ್ಬ ನಾಯಕ ತನ್ನ ಆಟದ ಕಡೆಗೂ ಗಮನ ಹರಿಸಬೇಕು. ಹಾಗೇ ತಂಡದ ಇತರೇ ಆಟಗಾರರ ಬಗ್ಗೆಯೂ ಕಾಳಜಿಯನ್ನು ಹೊಂದಿರಬೇಕು. ಅವರ ಸಾಮಥ್ರ್ಯವನ್ನು ಅರಿತುಕೊಂಡು ಅವರಿಗೂ ಮಾರ್ಗದರ್ಶನಗಳನ್ನು ನೀಡಬೇಕು. ಆಗ ತಂಡಕ್ಕೆ ಒಳ್ಳೆಯದಾಗುತ್ತೆ. ನಾಯಕನಿಗೂ ಒಳ್ಳೆಯದಾಗುತ್ತೆ ಅಂತ ಹೇಳ್ತಾರೆ ಮದನ್ ಲಾಲ್.
ನಾಯಕ ತಂಡದ ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕು. ಅವರಿಗೆ ಉತ್ತಮ ಅವಕಾಶಗಳನ್ನು ನೀಡಬೇಕು. ಆಗ ಆಟಗಾರರ ಜೊತೆಗೆ ಹೆಚ್ಚಾಗಿ ಬೆರೆಯಬೇಕು. ಆಗ ಆಟಗಾರರು ಯಾವುದೇ ಅಂಜಿಕೆಗಳು ಇಲ್ಲದೆ ನಾಯಕನಿಗೆ ಸಾಥ್ ಕೊಡ್ತಾರೆ. ಪಂದ್ಯದ ಗೇಮ್ ಪ್ಲಾನ್‍ಗಳ ಬಗ್ಗೆ ಚರ್ಚೆಯನ್ನು ಮಾಡ್ತಾ ಇರಬೇಕು. ಆಗ ಮಾತ್ರ ಯಶ ಸಾಧಿಸಲು ಸಾಧ್ಯ ಎಂಬುದು ಮದನ್ ಲಾಲ್ ಅವರ ಅಭಿಮತ.
ಇನ್ನು ಸಚಿನ್ ತೆಂಡುಲ್ಕರ್ ಪಂದ್ಯದ ಗತಿಯನ್ನು ಬಲುಬೇಗನೇ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಪಂದ್ಯದ ಗತಿಯನ್ನು ಅರಿತುಕೊಳ್ಳುವಂತಹ ಸಾಮಥ್ರ್ಯ ಅವರಲ್ಲಿತ್ತು. ಅಲ್ಲದೆ ಆಟಗಾರರು ಎಲ್ಲಿ ತಪ್ಪು ಮಾಡುತ್ತಿದ್ದಾರೆ. ಹೇಗೆ ಸರಿಪಡಿಸಿಕೊಳ್ಳಬೇಕು ಎಂಬುದನ್ನೇಲ್ಲಾ ಹೇಳುತ್ತಿದ್ದರು. ಆದ್ರೆ ಕೆಲವೊಂದು ಬಾರಿ ಹಿನ್ನಡೆಯಾಗುತ್ತದೆ. ಅವರು ಅವರ ಆಟದ ಕಡೆಗೆ ಹಚ್ಚಿನ ಗಮನ ಹರಿಸುತ್ತಿದ್ದರು. ಹಾಗಂತ ಅವರು ಉತ್ತಮ
ನಾಯಕನಲ್ಲ ಎಂದು ಹೇಳಲು ಸಾಧ್ಯವಿಲ್ಲ ಅಂತ ಮದನ್ ಲಾಲ್ ಅಡ್ಡಗೋಡೆಯ ಮೇಲೆ ದೀಪವಿಟ್ಟವರಂತೆ ಹೇಳಿದ್ದಾರೆ.
ಸಚಿನ್ ತೆಂಡುಲ್ಕರ್ 73 ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.ಇದ್ರಲ್ಲಿ ಗೆದ್ದಿರೋದು ಬರೀ 23 ಪಂದ್ಯಗಳು. 43 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ಹಾಗೇ 25 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಕೇವಲ ನಾಲ್ಕು ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. 9 ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದಾರೆ. 9 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.








