ಮೈಸೂರು: ರಾಜ್ಯದ ರಾಜಕಾರಣಿಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಕಲಲ್ಫುಲ್ ವ್ಯಕ್ತಿತ್ವ. ಕೆಲವೊಮ್ಮೆ ಕೋಪ, ಉಡಾಫೆ ಮಾತುಗಳಿಂದಲೇ ಟೀಕೆಗೆ ಗುರಿಯಾಗುತ್ತಾರೆ. ಆದರೆ, ಸಿದ್ದರಾಮಯ್ಯ ಅವರ ಹಾಸ್ಯಪ್ರಜ್ಞೆ ಹಾಗೂ ಬಿಂದಾಸ್ ವ್ಯಕ್ತಿತ್ವ ಗಮನ ಸೆಳೆಯುತ್ತದೆ.
ಕೆಲವೊಂದು ವಿಚಾರಗಳಿಗೆ ಸಿದ್ದರಾಮಯ್ಯ ತಲೆ ಕೆಡಿಸಿಕೊಳ್ಳಲು ಹೋಗಲ್ಲ. ಇತ್ತೀಚೆಗೆ ತಾವು ಖರೀದಿ ಮಾಡಿದ್ದ ಸೈಕಲ್ ಏರಿ ಬೆಂಗಳೂರಿನ ನಿವಾಸದ ಬಳಿ ಜಾಲಿ ರೈಡ್ ಮಾಡಿದ್ದಾರೆ. ಈ ವಿಡಿಯೋವನ್ನು ಅಭಿಮಾನಿಯೊಬ್ಬರು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ ಟಿಕ್ಟಾಕ್ನಲ್ಲಿ ವೈರಲ್ ಮಾಡಿದ್ದಾರೆ. ಟಿಕ್ನಲ್ಲೂ ಸೌಂಡ್ ಮಾಡಿದ್ದ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿದೆ.
70ರ ಹರೆಯದಲ್ಲೂ ಸಿದ್ದರಾಮಯ್ಯ ಯುವಕರು ನಾಚಿಸುವಂತೆ ಸದಾ ಚಟುವಟಿಕೆಯಿಂದ ಕೂಡಿರುತ್ತಾರೆ. ಸಿದ್ದರಾಮಯ್ಯ ಅವರ ಬೆಳಗಿನ ವ್ಯಾಯಾಮ ಆರಂಭವಾಗುವುದೇ ಸೈಕಲ್ ಸವಾರಿ ಮೂಲಕ. ವ್ಯಾಯಾಮಕ್ಕೆಂದು ಸಿದ್ದರಾಮಯ್ಯ ಹೊಸ ಸೈಕಲ್ನ್ನು ಖರೀದಿ ಮಾಡಿದ್ದಾರೆ. ಸೈಕಲ್ನ್ನು ಮನೆಗೆ ತಂದು ಕೊಡುತ್ತಿದ್ದಂತೆ ಪಂಚೆಯಲ್ಲೇ ಸೈಕಲ್ ಏರಿ ಒಂದು ರೌಂಡ್ ಹೋಗಿ ಬಂದಿದ್ದಾರೆ.
ಬಾಲ್ಯದಲ್ಲಿ ಬಡತನದಲ್ಲೇ ಬೆಳೆದ ಸಿದ್ದರಾಮಯ್ಯ ಅವರಿಗೆ ಅಂದು ಸೈಕಲ್ ಈಗಿನ ಬೆಂಜ್ ಕಾರಿಗೆ ಸಮಾನ ಆಗಿತ್ತು. ಕಾಲೇಜು ದಿನಗಳಲ್ಲಿ ಸೈಕಲ್ ಏರಿ ಇಡೀ ಮೈಸೂರನ್ನು ಒಂದು ಸುತ್ತುಹಾಕಿ ಬರುತ್ತಿದ್ದರಂತೆ. ಇಂತಹ ತಮ್ಮ ಬಾಲ್ಯದ ದಿನಗಳನ್ನು ಹಲವು ಸಂದರ್ಶನಗಳಲ್ಲಿ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ.








