ಮಂಡ್ಯ: ಇತ್ತೀಚೆಗಷ್ಟೇ ಮತ್ತೊಮ್ಮೆ ಆರಂಭವಾಗಿದ್ದ ಸರ್ಕಾರಿ ಸಕ್ಕರೆ ಕಾರ್ಖಾನೆ ಬರೋಬ್ಬರಿ 40 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ.
ಮಂಡ್ಯದ ಮೈಶುಗರ್ ಕಾರ್ಖಾನೆ (Mysugar Sugar Factory) ಕೋಟಿ ಕೋಟಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದು ಕಂಡು ಬಂದಿದೆ. ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆಯಾಗಿರುವ ಮೈಶುಗರ್ 2000ನೇ ವರ್ಷದಿಂದಲೂ ಬಿಲ್ ಕಟ್ಟಿಲ್ಲ. ಹೀಗಾಗಿ ಇಲ್ಲಿಯವರೆಗೆ ಬಿಲ್ ನ ಮೊತ್ತ ಬರೋಬ್ಬರಿ 40 ಕೋಟಿ ರೂ. ಆಗಿದೆ. ಕಾರ್ಖಾನೆ ಪುನರಾರಂಭಕ್ಕೆ ರಾಜ್ಯ ಸರ್ಕಾರ 50 ಕೋಟಿ ರೂ. ಹಣವನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿತ್ತು. ಸಂಸದೆ ಸುಮಲತಾ (Sumalatha Ambareesh) ಕಾರ್ಖಾನೆ ಪುನರಾರಂಭಕ್ಕೆ ಚಾಲನೆ ನೀಡಿದ್ದರು.
ಕಾರ್ಯಾರಂಭಕ್ಕೆ ಸಿದ್ಧವಾಗಿರುವ ಕಾರ್ಖಾನೆ ಪ್ರಸಕ್ತ ವರ್ಷದಲ್ಲಿ 5 ಲಕ್ಷ ಟನ್ ಕಬ್ಬು ನುರಿಯುವ ಗುರಿ ಹೊಂದಿದೆ. ಇದಕ್ಕೆ ವಿದ್ಯುತ್ ಪೂರೈಕೆಯ ಅವಶ್ಯಕತೆಯಿದೆ. ಆದರೆ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದ್ದು, ಈಗ ದೊಡ್ಡ ತಲೆನೋವಾಗಿದೆ. ಹೀಗಾಗಿ ಮೈಶುಗರ್ ಕಾರ್ಖಾನೆಗೆ ವಿದ್ಯುತ್ ಪೂರೈಕೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ (Dinesh Guligowda) ಮನವಿ ಮಾಡಿ ಇಂಧನ ಸಚಿವರಿಗೆ ಪತ್ರ ಬರೆದಿದ್ದಾರೆ. ಮೈಶುಗರ್ ಹಲವು ವರ್ಷಗಳಿಂದ ನಷ್ಟಕ್ಕೆ ಸಿಲುಕಿದ್ದು, 40.86 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದೆ. ಸದ್ಯದ ಹಂಗಾಮಿನಲ್ಲಿ ಕಬ್ಬು ನುರಿಯುವ ಅವಶ್ಯಕತೆ ಇರುವುದರಿಂದ ವಿದ್ಯುತ್ ಪೂರೈಕೆ ಮಾಡಿದರೆ, ಹಂತ ಹಂತವಾಗಿ ಬಾಕಿ ಮೊತ್ತ ಪಾವತಿಸಲಾಗುತ್ತದೆ ಎಂದು ಪತ್ರದಲ್ಲಿ ಕೋರಿದ್ದಾರೆ.








