ಕೊಪ್ಪಳ : ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದಾರೆ. ಹೀಗಾಗಿ ದೇವಸ್ಥಾನಗಳಲ್ಲಿ ಕೂಡ ಭರ್ಜರಿ ಕಾಣಿಕೆ ಸಂಗ್ರಹವಾಗುತ್ತಿದೆ.
ಜಿಲ್ಲೆಯಲ್ಲಿನ ಪ್ರಸಿದ್ಧ ಹಾಗೂ ಜಿಲ್ಲೆಯ ಆರಾಧ್ಯ ದೇವತೆ ಹುಲಿಗೆಮ್ಮ ದೇವಿಯ (Huligemma Temple) ದೇವಸ್ಥಾನಕ್ಕೆ ಹೆಚ್ಚಿನ ಭಕ್ತರು ಆಗಮಿಸಿದ್ದು, ಕೇವಲ ಒಂದೇ ತಿಂಗಳಲ್ಲಿ ಹುಲಿಗೆಮ್ಮ ದೇವಿಯ ಹುಂಡಿಯಲ್ಲಿ 1 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಶಕ್ತಿ ಯೋಜನೆ (Shakti Yojana) ಜಾರಿಯಾದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕೂಡ ದುಪ್ಪಟ್ಟಾಗಿತ್ತು. ಹೀಗಾಗಿ ಹುಂಡಿಯಲ್ಲಿ ಕಾಣಿಕೆ ಸಂಗ್ರಹ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಮುನಿರಾಬಾದ್ನ ಹುಲಿಗಿಯಲ್ಲಿರುವ ಹುಲಿಗೆಮ್ಮ ದೇವಿಗೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿರುತ್ತಾರೆ.
ದೇವಸ್ಥಾನದಲ್ಲಿ 33 ದಿನಗಳಲ್ಲಿ 99,69,725 ರೂ. ಕಾಣಿಕೆ ಸಂಗ್ರಹವಾಗಿದೆ. ಅಲ್ಲದೇ 225 ಗ್ರಾಂ ಚಿನ್ನ, 14 ಕೆಜಿ ಬೆಳ್ಳಿ ಕಾಣಿಕೆಯಾಗಿ ಬಂದಿದೆ.








