ಬಕ್ರೀದ್ ಸಂಭ್ರಮದಲ್ಲಿದ್ದ ಮುಸ್ಲಿಂ ಯುವಕನೊಬ್ಬನನ್ನು ಅದೇ ಸಮುದಾಯದ ಸ್ನೇಹಿತರು ಕೊಲೆಮ ಡಿರುವ ಘಟನೆ ಸೂರಿ ಕಾಲೋನಿಯಲ್ಲಿ ಗುರುವಾರ ನಡೆದಿದೆ. ಸ್ನೇಹಿತರ ನಡುವೆ ನಡೆದಿದ್ದ ವಾಗ್ವಾದ ಕೊಲೆಯಲ್ಲಿ ಅಂತ್ಯವಾಗಿದೆ.
ಬಳ್ಳಾರಿಯ ನೇತಾಜಿ ನಗರದ ಲಿಯಾಖತ್ ಅಲಿಯಾಸ್ ರೋಷನ್ (24) ಕೊಲೆಯಾದ ಯುವಕ. ಈತ ಕಲಬುರಗಿಯಲ್ಲಿ ಅರೇಬಿಕ್ ವಿದ್ಯಾಭ್ಯಾಸ ಮಾಡುತ್ತಿದ್ದು, ಬಕ್ರೀದ್ ಹಿನ್ನೆಲೆಯಲ್ಲ ಬುಧವಾರ ಸಂಜೆ ಬಳ್ಳಾರಿಗೆ ಆಗಮಿಸಿದ್ದ. ಬಕ್ರೀದ್ ದಿನ ಸಂಜೆ ಸ್ನೇಹಿತರೊಂದಿಗೆ ಈದ್ಗಾ ಮೈದಾನದ ಎರುರುಗಡೆ ಇರುವ ಸೂರಿ ಕಾಲೋನಿಗೆ ಪಾರ್ಟಿ ಮಾಡಲು ಹೋದಾಗ ಸ್ನೇಹಿತರ ಮಧ್ಯೆ ಮಾತಿಗೆ ಮಾತು ಬೆಳೆದು ಮಾರಾಕಾಸ್ತ್ರದಿಂದ ಚುಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಎಸ್ಪಿ ನಟರಾಜ್, ಗ್ರಾಮೀಣ ಠಾಣೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ಮೃತ ದೇಹವನ್ನು ವಿಮ್ಸ್ ಗೆ ಕಳಹಿಸಿದ್ದಾರೆ. ಈಗಾಗಲೇ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸದ್ಯ ಸ್ಥಳಕ್ಕೆ ಆಗಮಿಸಿರುವ ಪೊಲೀಸರು, ಸಂಶಯಾಸ್ಪದ ಯುವಕರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಕೊಲೆಗೆ ನಿಖರ ಕಾರಣ ಇದುವರೆಗೆ ತಿಳಿದು ಬಂದಿಲ್ಲ. ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದಾರೆ.








