ಹುಬ್ಬಳ್ಳಿ : ಅವರು ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಎಲ್ಲರ ವಿರೋಧ ಕಟ್ಟಿಕೊಂಡು ಪ್ರೀತಿಸಿ ವಿವಾಹವಾಗಿದ್ದರು. ಆರಂಭದಲ್ಲಿ ಇಬ್ಬರೂ ಸಂತಸವಾಗಿಯೇ ಇದ್ದರು. ಹೀಗಾಗಿ ಇಬ್ಬರಿಗೂ ಮುದ್ದಾದ ಗಂಡು ಮಗು ಇತ್ತು. ಆದರೆ, ಇತ್ತೀಚೆಗೆ ಈ ದಂಪತಿಯ ಬದುಕಲ್ಲಿ ಅದೇನೊ ಬಿರುಗಾಳಿ ಬೀಸಿ, ಪಾಪಿ ಪತಿಯು ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಈ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ಸುಧಾ (20) ಸಾವನ್ನಪ್ಪಿದ ದುರ್ದೈವಿ. ಕೊಲೆ ಮಾಡಿದ ನಂತರ ಆರೋಪಿ ಪತಿ ಶಿವಯ್ಯ ನಾಪತ್ತೆಯಾಗಿದ್ದಾನೆ. ಎಂದಿನಂತೆ ಇಂದು ಬೆಳಿಗ್ಗೆ ನೀರು ಬಂದಿದೆ. ಆದರೆ, ಸುದಾ ಮಾತ್ರ ಬಾಗಿಲು ತೆರೆದಿಲ್ಲ. ಕೋಣೆಯಲ್ಲಿ ಮಗು ಕೂಡ ಅಳುತ್ತಿದೆ. ಇದನ್ನು ಗಮನಿಸಿದ ಪಕ್ಕದ ನಿವಾಸಿಗಳು ಬಾಗಿಲು ಒಡೆದಿದ್ದಾರೆ.
ಆಗ ಸುಧಾ ಸಾವನ್ನಪ್ಪಿರುವುದು ಗೊತ್ತಾಗಿದೆ. ಶಿವಯ್ಯ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದ. ಬೆಳಗ್ಗೆ ಮನೆಯಿಂದ ಹೋದರೆ ರಾತ್ರಿಯೇ ಬರುತ್ತಿದ್ದ. ಇತ್ತೀಚೆಗೆ ವಿಪರೀತ ಸಾಲ ಮಾಡಿಕೊಂಡಿದ್ದ, ಇದೇ ವಿಚಾರವಾಗಿ ಇಬ್ಬರ ನಡುವೆ ಹೆಂಡತಿಯೊಂದಿಗೆ ಗಲಾಟೆ ನಡೆಯುತ್ತಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಸ್ಥಳಕ್ಕೆ ಪೊಲಿಸರು (Police) ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆ ಬೀಸಿದ್ದಾರೆ.








