1996ರಲ್ಲಿ ಮಾಜಿ ಕೋಚ್ ಮದನ್ ಲಾಲ್ ಸೌರವ್ ಗಂಗೂಲಿಗೆ ನೀಡಿದ್ದ ಸಲಹೆ ಏನು..?
ಸೌರವ್ ಗಂಗೂಲಿ… ಟೀಮ್ ಇಂಡಿಯಾದ ಮಾಜಿ ನಾಯಕ. ಸದ್ಯ ಬಿಸಿಸಿಐ ಅಧ್ಯಕ್ಷ. ಅದಕ್ಕಿಂತಲೂ ಹೆಚ್ಚಾಗಿ ಸೌರವ್ ಗಂಗೂಲಿ ಅಂದ್ರೆ ವಿಶ್ವ ಕ್ರಿಕೆಟ್‍ನ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರು. ಆದ್ರೆ ಸೌರವ್ ತನ್ನ ಆಟಕ್ಕಿಂತಲೂ ಹೆಚ್ಚಾಗಿ ಗುರುತಿಸಿಕೊಂಡಿದ್ದು ಒಬ್ಬ ನಾಯಕನಾಗಿ. ಹೌದು, ಇವತ್ತೇನಾದ್ರೂ ಟೀಮ್ ಇಂಡಿಯಾ ವಿಶ್ವಕ್ರಿಕೆಟ್ ನಲ್ಲಿ ಈ ಮಟ್ಟದ ಪ್ರದರ್ಶನ ನೀಡಲು ಪ್ರಮುಖ ಕಾರಣೀಕರ್ತರು ಗಂಗೂಲಿ. ಯುವ ಆಟಗಾರರನ್ನು ಗುರುತಿಸಿ, ತಂಡದಲ್ಲಿ ಆಕ್ರಮಣಕಾರಿ ಪ್ರವೃತ್ತಿಯನ್ನು ಬೆಳಸಿದ್ದ ಅದ್ಭುತ ಕ್ಯಾಪ್ಟನ್ ದಾದಾ ಎಂಬುದರಲ್ಲಿ ಎರಡು ಮಾತಿಲ್ಲ.
1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಶತಕ ದಾಖಲಿಸುವ ಮೂಲಕ ಎಂಟ್ರಿಕೊಟ್ಟವರು
ಕೊಲ್ಕತ್ತಾದ ಮಹಾರಾಜ ಗಂಗೂಲಿ. ಅಲ್ಲಿಂದ 2008-2009ರ ತನಕ ಗಂಗೂಲಿ ಹಿಂತಿರುಗಿ ನೋಡಿದ್ದೇ ಇಲ್ಲ. ಕೇವಲ ನಾಲ್ಕು ವರ್ಷಗಳಲ್ಲಿ ಟೀಮ್ ಇಂಡಿಯಾದ ನಾಯಕತ್ವದ ಅವಕಾಶ ಸಿಕ್ಕಾಗ ಹಿಂದೆ ಮುಂದೆ ಯೋಚನೆ ಮಾಡಿರಲಿಲ್ಲ. ಸಂಕಷ್ಟದ ಸಮಯದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಸಾರಥ್ಯ ವಹಿಸಿಕೊಂಡ್ರು. ವಿದೇಶಿ ನೆಲದಲ್ಲಿ ಮರೀಚಿಕೆಯಾಗುತ್ತಿದ್ದ ಗೆಲುವನ್ನು ದಕ್ಕಿಸಿಕೊಂಡು ಟೀಮ್ ಇಂಡಿಯಾದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2003ರ ವಿಶ್ವಕಪ್‍ನಲ್ಲಿ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಿದ್ರೂ ಕಪ್ ಗೆಲ್ಲಲು ಆಗಲಿಲ್ಲ. ಇದೊಂದು ಕೊರಗು ಗಂಗೂಲಿಯನ್ನು ಕಾಡುತ್ತಿದೆ. ಆದ್ರೆ ತಾನೇ ಬೆಳೆಸಿದ್ದ ಹುಡುಗರು 2011ರಲ್ಲಿ ಕಪ್ ಗೆದ್ದಾಗ ಸಂಭ್ರಮಪಟ್ಟುಕೊಂಡಿದ್ದರು. ಇದನ್ನು ಈ ಹಿಂದೆಯೇ ಸೌರವ್ ಗಂಗೂಲಿ ಹೇಳಿಕೊಂಡಿದ್ದರು.
ಇನ್ನು ಸೌರವ್ ಗಂಗೂಲಿ ಒಬ್ಬ ಆಟಗಾರನಾಗಿ ಯಶ ಸಾಧಿಸಿದ್ದು ಆರಂಭಿಕನಾಗಿ. ಸಚಿನ್ ತೆಂಡುಲ್ಕರ್ ಜೊತೆ ಇನಿಂಗ್ಸ್ ಆರಂಭಿಸಿ ವಿಶ್ವ ದಾಖಲೆಯನ್ನು ಕೂಡ ನಿರ್ಮಿಸಿದ್ದರು. ಯಶಸ್ವಿ ಆರಂಭಿಕ ಜೋಡಿ ಎಂಬಂತೆ ಬಿಂಬಿಸಲಾಗುತ್ತಿದ್ದ ಸೌರವ್ ಮತ್ತು ಸಚಿನ್ ಜೋಡಿ ಎದುರಾಳಿ ತಂಡದ ಬೌಲರ್‍ಗಳಿಗೆ ದುಃಸ್ವಪ್ನವಾಗಿ ಪರಿಣಮಿಸುತ್ತಿದ್ದರು.
ಆದ್ರೆ ಸೌರವ್ ಗಂಗೂಲಿ ತನ್ನ ಕ್ರಿಕೆಟ್ ಬದುಕಿನ ಆರಂಭದ ದಿನಗಳಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಹಾಗಿದ್ರೆ ಸೌರವ್ ಗಂಗೂಲಿ ಆರಂಭಿಕನಾಗಿ ಬಡ್ತಿ ಪಡೆದುಕೊಂಡಿರುವುದು ಹೇಗೆ ? ಸೌರವ್ ಗಂಗೂಲಿ ಆರಂಭಿಕನಾಗಿ ಆಡುವಂತೆ ಸಲಹೆ ನೀಡಿದ್ದು ಯಾರು ? ಸೌರವ್ ಗಂಗೂಲಿಯಲ್ಲಿ ಆರಂಭಿಕ ಆಟಗಾರನಾಗುವಂತಹ ಗುಣವಿದೆ ಎಂಬುದನ್ನು ತಿಳಿದುಕೊಂಡ ಕೋಚ್ ಯಾರು ? ಈ ಪ್ರಶ್ನೆಗೆ ಉತ್ತರ ಸಿಂಪಲ್. ಅವರೇ ಟೀಮ್ ಇಂಡಿಯಾದ ಕೋಚ್ ಆಗಿದ್ದ ಮದನ್ ಲಾಲ್.
ನಾವು ದಾದಾನಿಗೆ ಆರಂಭಿಕನಾಗಿ ಬಡ್ತಿ ನೀಡಲು ನಿರ್ಧಾರ ಮಾಡಿದ್ದೇವು. ಆದ್ರೆ ಅವರು ಇದನ್ನು ನೆನಪಿನಲ್ಲಿಟ್ಟುಕೊಂಡಿದ್ದಾರೋ ಇಲ್ವೋ ಅಂತ ಗೊತ್ತಿಲ್ಲ. ನಾನು ಆಗ ದಾದಾನಿಗೆ ಒಂದು ಮಾತು ಹೇಳಿದ್ದೆ. ದಾದಾ ಐದನೇ ಕ್ರಮಾಂಕದಲ್ಲಿ ಏನು ಮಾಡಲು ಸಾಧ್ಯವಿಲ್ಲ. ನೀವು ಇನಿಂಗ್ಸ್ ಆರಂಭಿಸಿ ಎಂದು ಸಲಹೆ ನೀಡಿದ್ದೆ ಎಂಬುದನ್ನು ಮದನ್ ಲಾಲ್ ನೆನಪಿಸಿಕೊಳ್ಳುತ್ತಿದ್ದಾರೆ.
1996ರ ನಂತರ ಸೌರವ್ ಗಂಗೂಲಿ ಟೀಮ್ ಇಂಡಿಯಾದ ಖಾಯಂ ಆಟಗಾರನಾಗಿದ್ದರು. ಕೆಲವೊಂದು ಪಂದ್ಯಗಳಲ್ಲಿ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಹಾಗೇ ಶ್ರೀಲಂಕಾದಲ್ಲಿ ನಡೆದಿದ್ದ ಸಿಂಗರ್ ವಲ್ರ್ಡ್ ಸಿರೀಸ್ ಟೂರ್ನಿಯಲ್ಲಿ ಸೌರವ್ ಗಂಗೂಲಿ ಐದನೇ ಕ್ರಮಾಂಕದಲ್ಲಿ ಆಡಿದ್ದರು. ಆದ್ರೆ ಐದನೇ ಕ್ರಮಾಂಕದಲ್ಲಿ ಗಂಗೂಲಿ ಅಷ್ಟೇನೂ ಯಶ ಸಾಧಿಸಲಿಲ್ಲ ಎಂದು ಹೇಳ್ತಾರೆ ಮದನ್ ಲಾಲ್.
1996, ಅಕ್ಟೋಬರ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜೈಪುರದಲ್ಲಿ ಗಂಗೂಲಿ ಸಚಿನ್ ಜೊತೆ ಇನಿಂಗ್ಸ್ ಆರಂಭಿಸಿದ್ದರು. ಆಗ ಮದನ್ ಲಾಲ್ ತಂಡದ ಕೋಚ್ ಆಗಿದ್ದರು. ಪಂದ್ಯಕ್ಕೆ ಮುನ್ನವೇ ಮದನ್ ಲಾಲ್ ಗಂಗೂಲಿಗೆ ಸಲಹೆ ನೀಡಿದ್ದರು. ಆ ಪಂದ್ಯದಲ್ಲಿ ಗಂಗೂಲಿ ಅರ್ಧಶತಕ ಕೂಡ ದಾಖಲಿಸಿದ್ದರು. ನಂತರ
ಸಚಿನ್ ಜೊತೆ ಖಾಯಂ ಆಗಿ ಗಂಗೂಲಿ ಆರಂಭಿಕ ಆಟಗಾರನಾಗಿದ್ದರು.
ಪ್ರತಿ ಆಟಗಾರನಿಗೂ ಅವರದ್ದೇ ಒಂದು ವಿಶೇಷತೆ ಇರುತ್ತೆ. ಗಂಗೂಲಿ ಕೂಡ ಹಾಗೇ. ಇನ್ನು ಕ್ರೀಸ್‍ನಲ್ಲಿ ನಿಲ್ಲಲು ಪ್ರತಿ ಆಟಗಾರನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾನೆ. ಕೆಲವು ಓವರ್‍ಗಳಲ್ಲಿ ಎರಡು ಮೂರು ರನ್ ಗಳಿಸಿದ್ರೂ ಪರವಾಗಿಲ್ಲ. ಪರಿಸ್ಥಿತಿಯನ್ನು ಅರಿತುಕೊಂಡು ಆಡಬೇಕಾಗುತ್ತದೆ. ಇತ್ತಿಚಿನ ದಿನಗಳಲ್ಲಿ ವಿರಾಟ್ ಕೊಹ್ಲಿ, ಅಜ್ಯಂಕ್ಯಾ ರಹಾನೆ ಆ ರೀತಿಯ ಆಟವನ್ನು ಆಡ್ತಾರೆ ಎಂದು ಮದನ್ ಲಾಲ್ ಹೇಳಿದ್ರು.
ಗಂಗೂಲಿಗೆ ನಾನು ಸಲಹೆ ನೀಡಿದಾಗ ಓಕೆ ಅಂದಿದ್ದರು. ಆ ನಂತರ ಗಂಗೂಲಿ ಹಿಂತಿರುಗಿ ನೋಡಲೇ ಇಲ್ಲ. ಸಚಿನ್ ಮತ್ತು ಗಂಗೂಲಿ ಜೋಡಿ ಆಗ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಅಲ್ಲದೆ ಇವರಿಬ್ಬರ ಜೊತೆಯಾಟದಲ್ಲಿ ಟೀಮ್ ಇಂಡಿಯಾ ಹಲವಾರು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಅಂದ ಹಾಗೇ ಗಂಗೂಲಿಗೆ ನಾನು ಈ ಸಲಹೆ ನೀಡಿದ್ದು 1996ರ ಶ್ರೀಲಂಕಾ ಸರಣಿಯ ವೇಳೆ ಎಂದು ಮದನ್ ಲಾಲ್ ಈ ಸಂದರ್ಭದಲ್ಲಿ ನೆನಪು ಮಾಡಿಕೊಂಡ್ರು.








