ನಾಣ್ಯ, ನೋಟುಗಳ ವಿಚಾರದಲ್ಲಿ ಜನರಿಗೆ ಒಂದು ರೀತಿಯಲ್ಲಿ ಸದಾ ಅನುಮಾನಗಳೇ ತುಂಬಿರುತ್ತವೆ. 10 ರುಪಾಯಿ ನಾಣ್ಯ, 5 ರುಪಾಯಿ ನೋಟು ಇತ್ಯಾದಿಯನ್ನು ಜನರೂ ಮುಟ್ಟೋದಿಲ್ಲ, ಅಂಗಡಿಯವರೂ ಸ್ವೀಕರಿಸಲ್ಲ. ಸೋಷಿಯಲ್ ಮೀಡಿಯಾ, ವಾಟ್ಸಾಪ್ ಇತ್ಯಾದಿ ಕಡೆ ತಪ್ಪು ಮಾಹಿತಿ ಇದಕ್ಕೆ ಕಾರಣವಾಗಿರುತ್ತದೆ.
ಇದೀಗ ಸ್ಟಾರ್ ಚಿಹ್ನೆ ಇರುವ 500 ರೂ. ಮುಖಬೆಲೆಯ ನೋಟುಗಳು ಮಾರುಕಟ್ಟೆಗೆ ಬಂದಿದ್ದು ಇದು ನಕಲಿ ನೋಟಾಗಿದೆ. ಇಂತಹ ನೋಟುಗಳನ್ನು ಸ್ವೀಕರಿಸುವಾಗ ಎಚ್ಚರದಿಂದಿರಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಅಲ್ಲದೆ ಈ ನೋಟುಗಳನ್ನು ಅಮಾನ್ಯವಾಗಿವೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದ್ದು ಸ್ಟಾರ್ ಚಿಹ್ನೆ ಇರುವ ನೋಟು ಸಂಪೂರ್ಣ ಸಿಂಧುವಾಗಿದ್ದು ಬೇರೆ ನೋಟುಗಳಂತೆ ಚಲಾವಣೆ ಮಾಡಬಹುದು ಎಂದು ಹೇಳಿದೆ.
ನೋಟುಗಳಲ್ಲಿ ಸ್ಟಾರ್ ಚಿಹ್ನೆ ಎಲ್ಲಿರುತ್ತದೆ?
ಯಾವುದೇ ನೋಟಿನಲ್ಲೂ ನೀವು ಸೀರಿಯಲ್ ನಂಬರ್ ಅನ್ನು ನೋಡಬಹುದು. ಈ ನಂಬರ್ನಲ್ಲಿ ಮೊದಲಿಗೆ 3 ಅಂಕಿಗಳ ಆಲ್ಫಾನ್ಯೂಮರಿಕ್ ಸಂಖ್ಯೆಯ ಪ್ರಿಫಿಕ್ಸ್ ಇರುತ್ತದೆ. ಅದಾದ ಬಳಿಕ ಸೀರಿಯಲ್ ನಂಬರ್ ಇರುತ್ತದೆ. ಕೆಲ ನೋಟುಗಳಲ್ಲಿ ಪ್ರಿಫಿಕ್ಸ್ ಮತ್ತು ಸೀರಿಯಲ್ ನಂಬರ್ ಮಧ್ಯೆ ಸ್ಟಾರ್ ಚಿಹ್ನೆ ದಾಖಲಾಗಿರುತ್ತದೆ.
ನೋಟುಗಳಲ್ಲಿ ಸ್ಟಾರ್ ಚಿಹ್ನೆ ಏಕೆ ಹಾಕಲಾಗಿರುತ್ತದೆ?
ಆರ್ಬಿಐ ಹೇಳಿರುವ ಪ್ರಕಾರ, ನೋಟುಗಳನ್ನು ಮುದ್ರಿಸುವಾಗ ಕೆಲವು ದೋಷದಿಂದ ಕೂಡಿರಬಹುದು. ಸೀರಿಯಲ್ ನಂಬರ್ ಪ್ರಕಾರ ಬಂಡಲ್ಗಳಲ್ಲಿ ನೋಟುಗಳಿರುತ್ತವೆ. ದೋಷಯುಕ್ತ ನೋಟುಗಳಿದ್ದಲ್ಲಿ ಅದಕ್ಕೆ ಬದಲಿಯಾಗಿ ಬೇರೆ ನೋಟು ಮುದ್ರಿಸಿ ಬಂಡಲ್ಗೆ ಸೇರಿಸಲಾಗುತ್ತದೆ. ಈ ಬದಲಿ ನೋಟುಗಳ ಸೀರಿಯಲ್ ನಂಬರ್ ಮಧ್ಯೆ ಸ್ಟಾರ್ ಗುರುತನ್ನು ಸೇರಿಸಲಾಗುತ್ತದೆ ಎಂದು ಹೇಳಲಾಗಿದೆ.