ವಿಷ್ಣುವಿನ ಕಣ್ಣಂಚಿನ ನೀರು ನೇತ್ರಾವತಿ ನದಿ..!
Vishnu’s eye water is Netravati river.
ವಿಷ್ಣುವು ವರಾಹ ರೂಪದಲ್ಲಿ ಬಂದು ಹಿರಣ್ಯಾಕ್ಷನನ್ನು ಸಂಹರಿಸಿ ಕಥೆ ನಿಮಗೆ ಗೊತ್ತೇ ಇದೆ. ವರಾಹ ರೂಪದಿ ವಿಷ್ಣು ಹಿರಣ್ಯಾಕ್ಷನನ್ನು ಸಂಹರಿಸಿದ ನಂತರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ 16 ಕಿಮೀ ದೂರದಲ್ಲಿರುವ ಪಶ್ಚಿಮಘಟ್ಟಗಳ ಬಲ್ಲಾಳರಾಯನ ದುರ್ಗದ ಗಂಗಾಮೂಲ, ವರಾಹಪರ್ವತ ಎಂದು ಕರೆಯಲ್ಪಡುವ ವೇದಪಾದ ಪರ್ವತದಲ್ಲಿ ವಿಶ್ರಮಿಸಿದನಂತೆ.
ಆಗ ವರಹಾ ಸ್ವಾಮಿಯ ಎಡಕೋರೆಯಿಂದ ಇಳಿದ ಹನಿಗಳು ತುಂಗಾ ನದಿಯಾಗಿಯೂ, ಭೂಮಿಯನ್ನು ಭದ್ರವಾಗಿ ಹಿಡಿದುಕೊಂಡ ಬಲದಾಡೆಯ ಹನಿಗಳು ಭದ್ರಾ ನದಿಯಾಗಿ ಹರಿಯಿತು. ಇನ್ನೂ ಕಣ್ಣಂಚಿನ ಹನಿಗಳು ನೇತ್ರವತಿಯಾಗಿಯೂ ಹರಿದುವೆಂಬುದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ವರಾಹ ಪರ್ವತದ ಕಣ್ಣಿನಂತಿರುವ ಭಾಗದಿಂದ ಹರಿದುಬರುವ ನೇತ್ರಾವತಿ ನದಿಯ ನೀರು ನೇತ್ರರೋಗ ಪರಿಹಾರಕವೆಂದು ನಂಬಿಕೆಯಿದೆ.
ನೇತ್ರಾವತಿ ನದಿಯನ್ನು ಗ್ರೀಕ್ ಇತಿಹಾಸಕಾರರು ನೀತ್ರಿ ಎಂದು ಕರೆದಿದ್ದಾರೆ. ಅಲ್ಲದೇ ನಮ್ಮ ಪೂರ್ವಜರು ಈ ನದಿಗೆ ಬಂಟ್ವಾಳ ನದಿ ಎಂದು ಕರೆಯುತ್ತಿದ್ದರು.
ನೇತ್ರಾವತಿ ನದಿ ಪಶ್ಚಿಮ ಘಟ್ಟದಿಂದ ನೈಋತ್ಯಾಭಿಮುಖವಾಗಿ ಹರಿದು ಧರ್ಮಸ್ಥಳವನ್ನು ಪವೇಶಿಸಿ, ಇಲ್ಲಿ ಶ್ರೀ ಮಂಜುನಾಥನ ಪಾದ ಸ್ಪರ್ಶಿಸಿ, ಮುಂದೆ ಕೊಡಗು, ಹಾಸನ ಜಿಲ್ಲೆಗಳ ಗಡಿಯಲ್ಲಿ ಹರಿದು ಬಿಸಲೆ ಘಾಟಿನ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸುತ್ತದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹಾದು ಅಣತಿ ದೂರದಲ್ಲಿರುವ ಉಪ್ಪಿನಂಗಡಿಯಲ್ಲಿ ಕುಮಾರಧಾರಾ ನದಿ ನೇತ್ರಾವತಿ ನದಿಯಲ್ಲಿ ವಿಲೀನವಾಗುತ್ತದೆ.
ಮಳೆಗಾಲದಲ್ಲಿ ನೇತ್ರಾವತಿ ನದಿಯಲ್ಲಿ ವಿಪರೀತವಾದ ನೆರೆ ಬರುತ್ತದೆ. ಈ ಸಮಯದಲ್ಲಿ ಉಕ್ಕಿ ಹರಿಯುವ ಮೂಲಕ ಬಂಟ್ವಾಳ ಹಲವು ಬಾರಿ ಮುಳುಗಡೆಯಾಗಿದ್ದು ಇದೆ. 1928 ಮತ್ತು 1974 ರಲ್ಲಿ ಸಂಭವಿಸಿದ ಪ್ರವಾಹವನ್ನು ಇಂದಿಗೂ ಜನ ಮರೆತಿಲ್ಲ.
ನೇತ್ರಾವತಿ ನದಿಯ ಆಸರೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತೆಂಗಡಿ, ಪುತ್ತೂರು, ಸುಳ್ಯ, ಬಂಟವಾಳ ಮತ್ತು ಮಂಗಳೂರು ತಾಲ್ಲೂಕಿನ ಕೃಷಿಕರು ಬತ್ತ, ಕಬ್ಬು, ಅಡಕೆ, ತೆಂಗು, ದವಸಧಾನ್ಯ ಮತ್ತು ಗೇರುಬೀಜವನ್ನು ಬೆಳೆಯತ್ತಾರೆ.
ಹೀಗೆ ದಕ್ಷಿಣ ಜಿಲ್ಲೆ ಜನರ ಜೀವನಾಡಿಯಾಗಿರುವ ನೇತ್ರಾವತಿ ನದಿ, ಮಂಗಳೂರಿನ ಸಮೀಪದ ಅರಬಿ ಸಮುದ್ರದಲ್ಲಿ ವಿಲೀನವಾಗುತ್ತದೆ.








