ವಿಶ್ವದಲ್ಲಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಯುನೈಟೆಡ್ ಸ್ಟೇಟ್ಸ್ ನ ಐತಿಹಾಸಿಕ ದ್ವೀಪ ರಾಜ್ಯ ಹವಾಯಿಯಲ್ಲಿನ ಕಾಳ್ಗಿಚ್ಚು ಮುಂದುವರೆದಿದ್ದು, ಮೃತರ ಸಂಖ್ಯೆ 67ಕ್ಕೆ ಏರಿಕೆ ಕಂಡಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹವಾಯಿ ಗವರ್ನರ್ ಜೋಶ್ ಗ್ರೀನ್, ಇನ್ನೂ ಪತ್ತೆಯಾಗದ ಸುಮಾರು 1 ಸಾವಿರ ಜನರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಹೇಳಿದ್ದಾರೆ. ವರದಿಯಂತೆ ಇಲ್ಲಿಯವರೆಗೆ ಅಧಿಕಾರಿಗಲು ಕಟ್ಟಡಗಳ ಹೊರಗಿರುವ ಜನರ ಹುಡುಕಾಟ ನಡೆಯುತ್ತಿದೆ. ಕಟ್ಟಡ ಒಳಭಾಗದಲ್ಲಿರುವ ದೇಹಗಳ ಹುಡುಕಾಟ ಇನ್ನಷ್ಟೇ ನಡೆಯಬೇಕಿದೆ ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಇನ್ನಿತರ ರಕ್ಷಣಾ ತಂಡ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದು, ಹತೋಟಿಗೆ ಬರಲಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳು ಇವೆ. ಎಲ್ಲಿ ನೋಡಿದರೂ ಸುಟ್ಟು ಕರಕಲಾಗಿರುವ ಅವಶೇಷಗಳು, ಕಟ್ಟಡ, ಮರಗಳು, ಪ್ರಾಣಿಗಳು ಸೇರಿದಂತೆ ಎಲ್ಲವೂ ಅಗ್ನಿಗೆ ಆಹುತಿಯಾಗಿದ್ದು, ಪ್ರದೇಶದ ತುಂಬೆಲ್ಲ ಬೂದಿ ಆವರಿಸಿಕೊಂಡಿದೆ. ಘಟನೆಯಿಂದಾಗಿ ನಗರ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ನೆಟ್ ವರ್ಕ್ ಕಡಿತವಾಗಿದೆ. ಈ ಕಾಳ್ಗಿಚ್ಚಿಗೆ ಸುಮಾರು 1700ಕ್ಕೂ ಅಧಿಕ ಕಟ್ಟಡಗಳು ಸುಟ್ಟು ಬೂದಿಯಾಗಿದೆ.








