ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತಕ್ಕೆ ಎದುರಾಗಿರುವ ಸೋಲು ಮುಂಬರುವ ಪಂದ್ಯಾವಳಿಗಳಲ್ಲಿ ತಂಡದ ಆತ್ಮವಿಶ್ವಾಸದ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ ಎಂದು ಪಾಕಿಸ್ತಾನದ ಮಾಜಿ ಆಟಗಾರ ಸಲ್ಮಾನ್ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಐದು ಪಂದ್ಯಗಳ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ 3-2ರ ಅಂತರದಲ್ಲಿ ಗೆದ್ದು ಪ್ರಶಸ್ತಿ ತನ್ನದಾಗಿಸಿಕೊಂಡಿತು. ಹೀಗಾಗಿ ವಿಂಡೀಸ್ ವಿರುದ್ಧ ಟೀಂ ಇಂಡಿಯಾ ಅನುಭವಿಸಿದ ಸರಣಿ ಸೋಲಿನ ಬಗ್ಗೆ ಭಾರತದ ಹಲವು ಮಾಜಿ ಕ್ರಿಕೆಟಿಗರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದೀಗ ಈ ಸಾಲಿಗೆ ಸೇರಿಕೊಂಡಿರುವ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ ಸಲ್ಮಾನ್ ಭಟ್, ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಎದುರಾದ ಸೋಲು ಮುಂದೆ ನಡೆಯಲಿರುವ ಏಷ್ಯಾಕಪ್ ಮತ್ತು ವಿಶ್ವಕಪ್ ಸೇರಿದಂತೆ ಮುಂಬರುವ ಪ್ರಮುಖ ಪಂದ್ಯಾವಳಿಗಳಲ್ಲಿ ತಂಡದ ಆತ್ಮವಿಶ್ವಾಸದ ಮೇಲೆ ಖಂಡಿತ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಈ ಕುರಿತು ತಮ್ಮ ಯೂಟ್ಯೂಬ್ ಶೋನಲ್ಲಿ ಮಾತನಾಡಿರುವ ಅವರು, ಮುಂಬರುವ ಪ್ರಮುಖ ಪಂದ್ಯಾವಳಿಗಳ ಸ್ವರೂಪದಲ್ಲಿ ಬದಲಾವಣೆ ಆಗುವ ಹೊರತಾಗಿ ಆಟಗಾರರ ಬಾಡಿ ಲಾಂಗ್ವೇಜ್‌ನಲ್ಲಿ ಆತ್ಮವಿಶ್ವಾಸ ಕಡಿಮೆಯಾಗಿರುವುದು ಕಾಣಲಿದೆ. ಯಾವ ಫಾರ್ಮ್ಯಾಟ್ ಆಡುತ್ತಿದ್ದೇವೆ, ಯಾರು ಎದುರಾಳಿ ಎಂಬುದು ಮುಖ್ಯವಲ್ಲ. ಬದಲಿಗೆ ಪಂದ್ಯದ ಗೆಲುವು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಹೀಗಾಗಿ ಈ ರೀತಿಯ ಸೋಲು ಖಂಡಿತ ಭಾರತದ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ ಎಂದಿದ್ದಾರೆ.
ಅನೇಕರು ಇದು ಟಿ20 ಸರಣಿ ಮತ್ತು ಭಾರತದ ಪ್ರಮುಖ ಆಟಗಾರರು ತಂಡದಲ್ಲಿ ಇರಲಿಲ್ಲ ಎನ್ನುತ್ತಾರೆ. ಆದರೆ ಇದು ಭಾರತದ ಸಾಮಾನ್ಯ ಅಭ್ಯಾಸವಾಗಿದ್ದು, ಯುವ ತಂಡವನ್ನು ಆಯ್ಕೆ ಮಾಡಿರುವುದು ಇದೇ ಮೊದಲಲ್ಲ. ಅಂತೆಯೇ ವೆಸ್ಟ್ ಇಂಡೀಸ್ ದೊಡ್ಡ ತಂಡವಾಗಿರಲಿಲ್ಲ, ಆದರೆ ಭಾರತಕ್ಕೆ ಅವರನ್ನು ಸೋಲಿಸುವುದು ಕಷ್ಟಕರವಾಗಿತ್ತು ಎಂದು ಸಲ್ಮಾನ್ ಭಟ್ ಹೇಳಿದ್ದಾರೆ.








