ದೇಶದಲ್ಲಿ ಕೊರೊನಾ ಸೋಂಕಿನ ಆರ್ಭಟ ಮುಂದುವರಿದಿದ್ದು, ಸಿಕ್ಕ ಸಿಕ್ಕವರ ದೇಹಹೊಕ್ಕಿ ಮರಣ ಮೃದಂಗ ಬಾರಿಸುತ್ತಿದೆ. ಸೋಂಕು ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡ ಹೊರತಾಗಿಯೂ ಈ ಹೆಮ್ಮಾರಿ ತನ್ನ ಕಬಂದ ಬಾಹುಗಳನ್ನು ಕ್ಷಿಪ್ರಗತಿಯಲ್ಲಿ ಚಾಚುತ್ತಲೇ ಇದೆ. ಏತನ್ಮಧ್ಯೆ ತೆಲುಗು ಗಬ್ಬರ್ ಸಿಂಗ್, ನಿರ್ಮಾಪಕ, ನಟ ಬಂಡ್ಲ ಗಣೇಶ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಇದು ಬಹುತೇಕ ಸ್ಟಾರ್ ನಟ-ನಟಿಯರಿಗೆ ಆತಂಕ ತಂದಿದೆ.
ಯಾಕೆಂದರೇ ಹೈದರಾಬಾದ್ ನ ಪ್ರತಿಷ್ಠಿತ ರಸ್ತೆ ಜ್ಯೂಬಿಲಿ ಹಿಲ್ಸ್ ನಲ್ಲಿ ಬಂಡ್ಲ ಗಣೇಶ್ ವಾಸವಿದ್ದಾರೆ. ಇದೇ ರಸ್ತೆಯಲ್ಲಿ ಸಾಕಷ್ಟು ಸ್ಟಾರ್ ನಟ-ನಟಿಯರಿದ್ದು, ಅವರಿಗೂ ಕೊರೊನಾ ಆತಂಕ ಮೂಡಿದೆ. ಇನ್ನು ಕೊರೊನಾ ಸೋಂಕಿತ ಬಂಡ್ಲ ಗಣೇಶ್ ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಕುಟುಂಬ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದೆ.
ಇದಲ್ಲದೆ ಗಣೇಶ್ ಜೊತೆಗೆ ಪ್ರಾಥಮಿಕ ಸಂಪರ್ಕದ್ದವರನ್ನು ಸದ್ಯ ಪತ್ತೆ ಹಚ್ಚಲಾಗುತ್ತಿದೆ. ಕೆಲವು ನಟ-ನಟಿಯರನ್ನು ಬಂಡ್ಲ ಭೇಟಿ ಮಾಡಿದ್ದರು ಎನ್ನಲಾಗುತ್ತಿದೆ.
ಇನ್ನು ಹೈದರಾಬಾದ್ ನಗರವೊಂದರಲ್ಲೇ ಈ ವರೆಗೆ 4395 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 305 ಮಂದಿ ಮಾತ್ರವೇ ಗುಣಮುಖರಾಗಿದ್ದಾರೆ. 23 ಮಂದಿ ಸಾವನ್ನಪ್ಪಿದ್ದಾರೆ.








