ಕ್ಷುಲ್ಲಕ ಕಾರಣಕ್ಕೆ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ನಡೆದಿದೆ.
ಈ ಘಟನೆ ಶಿಗ್ಗಾವಿ ತಾಲೂಕಿನ ಮೂಕಬಸರಿಕಟ್ಟಿ ಎಂಬ ಗ್ರಾಮದಲ್ಲಿ ನಡೆದಿದೆ. ಕೇಬಲ್ ತುಂಡಾದ ವಿಷಯಕ್ಕೆ ಸಂಬಂಧಿಸಿದಂತೆ ದಲಿತ ವ್ಯಕ್ತಿಯ ಮೇಲೆ ದೌರ್ಜನ್ಯ ಎಸಗಲಾಗಿದೆ. ಗ್ರಾಮದ ರಾಮಪ್ಪ ದುರಗಪ್ಪ ಹರಿಜನ ಎಂಬ ವ್ಯಕ್ತಿಯ ಮೇಲೆಯೇ ಹಲ್ಲೆ ನಡೆಸಲಾಗಿದೆ. ಸದ್ಯ ಹಲ್ಲೆಗೆ ಒಳಗಾದ ವ್ಯಕ್ತಿ ಬಂಕಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಬಂಕಾಪುರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ, ದಲಿತರ ಮನೆಗೆ ಭದ್ರತೆ ಒದಗಿಸಿದ್ದಾರೆ. ಹಲ್ಲೆ ನಡೆಸಿದ ಗ್ರಾಮದ ಖಲಂದರಸಾಬ್ ರಾಜೇಸಾಬನವರ, ರಬ್ಬಾನಿ ರಾಜೇಸಾಬನವರ, ಜಹೀರಅಹ್ಮದ ಸವಣೂರ, ಮೋದಿನಸಾಬ್ ರಾಜೇಸಾಬನವರ, ಆದಮ್ಸಾಬ್ ರಾಜೇಸಾಬನವರ ಎಂಬುವವರನ್ನು ವಶಕ್ಕೆ ಪಡೆದು, ತನಿಖೆ ಕೈಗೊಂಡಿದ್ದಾರೆ.
ಗ್ರಾಮದ ರಾಮಪ್ಪ ಅವರ ಮನೆಯ ಮುಂದೆ ಇದ್ದ ಮರದ ಟೊಂಗೆಗಳು ವಿದ್ಯುತ್ ಕಂಬಕ್ಕೆ ತಾಗುತ್ತಿದ್ದವು. ಹೀಗಾಗಿ, ಹೆಸ್ಕಾಂ ಸಿಬ್ಬಂದಿ ಮರದ ಟೊಂಗೆಗಳನ್ನು ಕತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ರಾಮಪ್ಪ ಅವರ ಮನೆ ಮುಂದೆ ಹಾದು ಹೊಗಿದ್ದ ಡಿಶ್ ಟಿವಿ ಕೇಬಲ್ ಆಕಸ್ಮಿಕವಾಗಿ ತುಂಡಾಗಿದೆ. ಈ ನಿಟ್ಟಿನಲ್ಲಿ ಕುಪಿತಗೊಂಡ ಆರೋಪಿಗಳು ಆತನೇ ವೈರ್ ಕಟ್ ಮಾಡಿದ್ದಾನೆಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.







