ಕೋಲಾರ-ನಮ್ ಜನ ಹೀಗೇನೆ ಏನ್ ಮಾಡ್ಬೆಡಿ ಅಂದ್ರೆ ಅದನ್ನೇ ಮಾಡ್ತಾರೆ. ಆದೇಶ ಉಲ್ಲಂಘನೆ ಮಾಡೋದು ಅಂದ್ರೆ ಅದೊಂತರಾ ಖುಷಿ. ಕೊರೋನಾದಿಂದ ಜನ ಸಾಯುತ್ತಿದ್ದರೂ ಡೋಂಟ್ ಕೇರ್. ಕೋರೋನಾ ಆತಂಕದ ನಡುವೆ ಸರ್ಕಾರ ಯಾವುದೇ ಖಾಸಗಿ ಕಾರ್ಯಕ್ರಮ, ಮೋಜು ಮಸ್ತಿ ಮಾಡಬೇಡಿ ಹುಷಾರಾಗಿರಿ ಅಂತ ಹೇಳಿದ್ರೂನೂ ಕೇಳಲ್ಲ.
ಇದಕ್ಕೆ ಉದಾಹರಣೆ ಅಂದ್ರೆ ಕೋಲಾರದ ಬಂಗಾರಪೇಟೆಯ ಕೊರೋನಾ ಪ್ರಕರಣ. ಇತ್ತೀಚಿಗೆ ಪಾರ್ಟಿಯೊಂದಕ್ಕೆ ಬೆಂಗಳೂರಿಗೆ ಹೋಗಿ ಬಂದಿದ್ದ ಕೋಲಾರದ ಬಂಗಾರಪೇಟೆ ಪಟ್ಟಣದ ಒಂದೇ ಕುಟುಂಬ ಇಬ್ಬರಿಗೆ ಕೊರೊನಾ ಸೋಂಕು ವಕ್ಕರಿಸಿದೆ. ಬಂಗಾರಪೇಟೆಯ ಸಿಂಗ್ ಲೇಔಟ್ ನ ಯುವತಿ ಹಾಗು ಸಹೋದರ ಬೆಂಗಳೂರಿನ ಯಲಹಂಕದಲ್ಲಿನ ದೊಡ್ಡಪ್ಪನ ಮನೆಯಲ್ಲಿ ಇತ್ತೀಚೆಗೆ ನಡೆದ ಔತಣಕೂಟಕ್ಕೆ ಹೋಗಿ ಬಂದಿದ್ದರು. ಪಾರ್ಟಿಯಿಂದ ಹಿಂದುರಿಗಿದ ನಂತರ ಮನೆಯಲ್ಲಿ ಯುವತಿಯ ದೊಡ್ಡಪ್ಪನಿಗೆ ಜ್ವರದ ಲಕ್ಷಣ ಕಾಣಿಸಿಕೊಂಡಿದೆ. ಕೂಡಲೇ ಅವರ ಆರೋಗ್ಯ ತಪಾಸಣೆ ಮಾಡಿದಾಗ ಸೋಂಕು ಖಚಿತಗೊಂಡಿದೆ. ಪಾರ್ಟಿಯಿಂದ ಬಂಗಾರಪೇಟೆಗೆ ಮರಳಿದ್ದ ಯುವತಿ ಮತ್ತು ಅವರ ತಮ್ಮನ ಬಗ್ಗೆ ಮಾಹಿತಿ ಕಲೆ ಹಾಕಿದ ಆರೋಗ್ಯ ಇಲಾಖೆ ಅಧಿಕಾರಿಗಳು ಅವರ ಕಫ ಹಾಗೂ ರಕ್ತ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಇನ್ನೂ ಶನಿವಾರ ರಾತ್ರಿಯೇ ವರದಿ ಬಂದಿದ್ದು, ಯುಬತಿ ಹಾಗೂ ಸಹೋದರರಿಗೆ ಸೋಂಕು ಇರುವುದು ಖಚಿತವಾಗಿದೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು
ಸೋಂಕಿತ ಅಕ್ಕ ಮತ್ತು ತಮ್ಮನ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಕುಟುಂಬದ ಎಲ್ಲಾ ಸದಸ್ಯರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಬಂಗಾರಪೇಟೆಯ ಸಿಂಗ್ ಲೇಔಟ್ ಅನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಇದಾಗಲೇ ಕೋಲಾರ ಜಿಲ್ಲಾಸ್ಪತ್ರೆಗೆ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲು ಬಂದಿದ್ದ ವ್ಯಕ್ತಿಯೊಬ್ಬರು ಕೊರೊನಾ ಸೋಂಕಿತರಾಗಿರುವುದು ತಿಳಿದು ಬಂದಿದೆ. ಇವರು ವೈದ್ಯಕೀಯ ಉಪಕರಣ ಅಳವಡಿಕೆಗಾಗಿ ಹಲವು ಆಸ್ಪತ್ರೆಗಳಿಗೆ ಭೇಟಿ ಕೊಟ್ಟಿದ್ದು, ಆತಂಕ ಹೆಚ್ಚಿಸಿದೆ. ಇವರು ಭೇಟಿ ನೀಡಿದ್ದ ಆಸ್ಪತ್ರೆಗಳಲ್ಲಿ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಇವರು ಬೆಂಗಳೂರಿನವರಾದ ಕಾರಣ ಜಿಲ್ಲೆಯಲ್ಲಿ ಚಿಕಿತ್ಸೆ ನೀಡಬೇಕೆ ಅಥವಾ ಬೆಂಗಳೂರಿಗೆ ಸ್ಥಳಾಂತರಿಸಬೇಕೆ ಎಂಬ ಬಗ್ಗೆ ಚರ್ಚೆ ನಡೆದಿದೆ. ಒಟ್ಟಿನಲ್ಲಿ ಸರ್ಕಾರದ ಆದೇಶಗಳನ್ನು ನಿರ್ಲಕ್ಷ್ಯ ಮಾಡಿ ಇಡೀ ಸಮಾಜಕ್ಕೆ ಸೋಂಕು ಹರಡಲು ಜನರ ಬೇಜವಾಬ್ದಾರಿಯೇ ಕಾರಣ ಎನ್ನಲಾಗುತ್ತದೆ








