ಕೋಲಾರ- ಕೊರೋನಾ ಆತಂಕದ ನಡುವೆ ಕೋಲಾರದಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಿವೆ ಈ ನಡುವೆ ಇದೇ ಕಾರಣದಿಂದಲೂ ಸೋಂಕು ಹೆಚ್ಚಾಗುತ್ತಿರುವ ಮಾತುಗಳು ಕೇಳಿ ಬರುತ್ತಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೋಲಾರ ಜಿಲ್ಲಾಡಳಿತ ಕ್ವಾರೆಂಟೈನ್ ಮಾಡಿದರೆ ಎಪಿಡೆಮಿಕ್ಟ್ ಕಾಯ್ದೆ 1897 ಮತ್ತು ಕರ್ನಾಟಕ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅನ್ವಯ ಎಫ್ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳಾದ ಬಿ. ಶಿವಸ್ವಾಮಿ ಅವರು ತಿಳಿಸಿದ್ದಾರೆ.
ಕೋವಿಡ್ 19 ಒಂದು ಸಾಂಕ್ರಾಮಿಕ ರೋಗ. ಅದನ್ನು ತಡೆಗಟ್ಟುವಲ್ಲಿ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದೆ. ಇದೇ ಹಿನ್ನೆಲೆಯಲ್ಲಿ ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದ್ದು, ಜಿಲ್ಲೆಗೆ ಕೋವಿಡ್ ವಾರ್ ರೂಂ ನಿಂದ ಜೂನ್ 18ರಿಂದ ಕ್ವಾರಂಟೇನ್ ಮಾಡಿದ ಜನರ ಮಾಹಿತಿ ಹಾಗೂ ವಿವರಗಳನ್ನು ಕಳುಹಿಸಲಾಗುತ್ತಿದೆ. ಇವರ ಬಗ್ಗೆ ಜಿಲ್ಲಾ ಕಂಟ್ರೋಲ್ ರೂಂ ಅವರು ನೀಡಿರುವ ನಂಬರ್ ಗಳಿಗೆ ಫೋನ್ ಮಾಡಿ ವಿಚಾರಿಸಿದಾಗ ಕ್ವಾರೆಂಟೈನ್ ಗೆ ಒಳಗಾಗಬೇಕಾದ ವ್ಯಕ್ತಿಗಳು ನಿಯಮಮೀರಿ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೆ ಹೋಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಇಂತಹ ಬೇಜವಾಬ್ದಾರಿ ಜನಗಳ ವಿರುದ್ಧ ವಿರುದ್ಧ ನಿಯಮಾನುಸಾರ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದಿದ್ದಾರೆ.
ಆದ್ದರಿಂದ ಕ್ವಾರಂಟೈ ನ್ ಗಳಲ್ಲಿ ಇರುವ ನಾಗರಿಕರು ಕ್ವಾರಂಟೈನ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಾಗೂ ಕರೋನಾ ರೋಗ ಹರಡದಂತೆ ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಜನರ ಒಳತಿಗಾಗಿ ಜಿಲ್ಲಾಡಳಿತ ಅಷ್ಟೇ ಕಟ್ಟುನಿಟ್ಟಿನ ಕ್ರಮ ರೂಪಿಸಿದೆ. ಆದರೆ ಜನರಿಂದ ನಿಯಮ ಉಲ್ಲಂಘನೆ ಹೆಚ್ಚಾಗುತ್ತಿರುವ ಕಾರಣ ಜಿಲ್ಲಾಡಳಿತದ ಕೆಂಗಣ್ಣಿಗೆ ಕಾರಣವಾಗಿದೆ.








