ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲವಾಡ ಕ್ರಾಸ್ ಬಳಿ ಇರುವ ಮದರಸಾ ಎ ಅರಬಿಯಾ ಅನ್ವಾರುಲ್ ಉಲೂಮನಲ್ಲಿ ನೂರಾ ಒಂದು ಸಾಮೂಹಿಕ ಮದುವೆಗಳನ್ನ ಮಾಡಲಾಯಿತು. ರಾಜ್ಯದಲ್ಲಿ ಇದೇ ಮೊದಲ ಬಾರಿ ಮದರಾಸವೊಂದರಲ್ಲಿ ಹಿಂದೂ ಧರ್ಮದವರ ಮದುವೆಯನ್ನ ಮಾಡಿ ಹೊಸ ಇತಿಹಾಸವನ್ನ ಇಲ್ಲಿ ಸೃಷ್ಟಿಸಲಾಯಿತು.
ಹಿಂದೂ ಮುಸ್ಲಿಂ ಭಾವೈಕ್ಯತೆ ಎತ್ತಿ ಹಿಡಿಯುವ ಉದ್ದೇಶದಿಂದ ಈ ಮದುವೆಯನ್ನ ವಿವಿಧ ಮುಸ್ಲಿಂ ಸಂಘಟನೆಗಳು ಹಾಗೂ ಇಸ್ಸಾ ಪೌಂಡೇಷನ್ ವತಿಯಿಂದ ನಡೆಸಲಾಯಿತು. 25 ಹಿಂದೂ ನವ ಜೋಡಿಗಳು ಇಲ್ಲಿ ಹೊಸ ಬಾಳಿಗೆ ಹೆಜ್ಜೆಯನ್ನಿಟ್ಟರು. ಹಾಗೆಯೇ 76 ಮುಸ್ಲಿಂ ನವ ಜೋಡಿಗಳು ಮದುವೆಯಾದರು ಹೊಸ ದಾಪಂತ್ಯ ಜೀವನಕ್ಕೆ ಕಾಲಿಟ್ಟರು. ಮೌಲ್ವಿಗಳು ಹಾಗೂ ಮುಸ್ಲಿಂ ಮುಖಂಡರು ಸೇರಿಕೊಂಡು ಇಂತಹದ್ದೊಂದು ಹೊಸ ಪದ್ದತಿಗೆ ನಾಂದಿ ಹಾಡಿದ್ದು, ಇವರ ಬೆನ್ನಿಗೆ ಹಿಂದೂ ಧರ್ಮದವರು ನಿಂತರು. ಈ ಮೂಲಕ ಸಮಾಜಕ್ಕೆ ಒಂದೊಳ್ಳೆ ಸಂದೇಶ ರವಾನಿಸಿದ್ದಾರೆ. ಹಿಂದೂ ಜೋಡಿಗಳ ಮದುವೆಯನ್ನ ಸ್ಥಳೀಯ ಸ್ವಾಮೀಜಿಗಳಿಂದ ಹಿಂದೂ ಸಂಪ್ರದಾಯದಂತೆ ಮಾಡಿದರು. ಮುಸ್ಲಿಂ ಜೋಡಿಗಳು ಮೌಲ್ವಿಗಳ ಸಮ್ಮುಖದಲ್ಲಿ ಖಬುಲ್ ಹೈ ಎಂದು ಹೇಳುವ ಮೂಲಕ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾದರು.








