ನವದೆಹಲಿ: ಸಾಮಾಜಿಕ ಜಾಲತಾಣಗಳ ಜಗತ್ತಿನಲ್ಲಿಂದು ಯುಟ್ಯೂಬರ್ ಧ್ರುವ್ ರಾಠಿ ಅವರ ಹೆಸರು ಬಹುತೇಕ ಎಲ್ಲರಿಗೂ ಚಿರಪರಿಚಿತ. ರಾಜಕೀಯ ವಿಶ್ಲೇಷಣೆಯ ಹೆಸರಿನಲ್ಲಿ ಪ್ರತಿನಿತ್ಯ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕಾಪ್ರಹಾರ ನಡೆಸುವುದನ್ನೇ ಕಾಯಕ ಮಾಡಿಕೊಂಡಿರುವ ಧ್ರುವ್ ರಾಠಿಗೆ, ಇದೀಗ ಅದೇ ಮೋದಿ ಅವರ ಹೆಸರಿನಿಂದಲೇ ಬರೋಬ್ಬರಿ 2 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಭರ್ಜರಿ ಲಾಟರಿ ಹೊಡೆದಿದೆ. ಮೋದಿ ವಿರೋಧವನ್ನೇ ತಮ್ಮ ಆದಾಯದ ಮೂಲವನ್ನಾಗಿ ಮಾಡಿಕೊಂಡಿರುವ ರಾಠಿ ಅವರ ಅಸಲಿ ವ್ಯವಹಾರದ ಗುಟ್ಟು ಈಗ ಬಯಲಾಗಿದೆ.
ಇತ್ತೀಚೆಗೆ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯ ಸುಧಾರಣೆಯ ಹೆಸರಿನಲ್ಲಿ ನಡೆದ ಪ್ರತಿಭಟನೆಗಳ ಹಿಂದೆ ವಿಚಿತ್ರ ಪಾತ್ರಧಾರಿಗಳು ಹುಟ್ಟಿಕೊಂಡಿದ್ದರು. ಜಿರಳೆಗಳ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಎಂಬಾತ ಅಮೆರಿಕದಿಂದ ಭಾರತವನ್ನು ಉದ್ಧಾರ ಮಾಡಲು ಪದೇಪದೇ ಇಲ್ಲಿಗೆ ಬಂದು ಐಷಾರಾಮಿ ಫ್ಲ್ಯಾಟ್ಗಳಲ್ಲಿ ವಾಸ್ತವ್ಯ ಹೂಡುತ್ತಿದ್ದ.
ಇದೇ ಮಾದರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಭಾರತವನ್ನು ವಿಮುಕ್ತಿಗೊಳಿಸಿ, ದೇಶವನ್ನು ಉದ್ಧಾರ ಮಾಡುತ್ತೇನೆ ಎಂದು ಹೊರಟವರಲ್ಲಿ ಜರ್ಮನಿಯಲ್ಲಿ ನೆಲೆಸಿರುವ ಯುಟ್ಯೂಬರ್ ಧ್ರುವ್ ರಾಠಿ ಕೂಡ ಒಬ್ಬರು. ಜರ್ಮನಿಯಿಂದ ತಮಗೆ ಬೇಕಾದಾಗಲೆಲ್ಲಾ ವಿಮಾನದ ಐಷಾರಾಮಿ ದರ್ಜೆಯಲ್ಲಿ ಪ್ರಯಾಣಿಸಿ ಭಾರತಕ್ಕೆ ಬರುವ ಇವರು, ಇಲ್ಲಿನ ಭವ್ಯ ಬಂಗಲೆಗಳಲ್ಲಿ ಉಳಿದುಕೊಂಡು ತಮ್ಮ ಬಳಗಕ್ಕೆ ಭರ್ಜರಿ ಪಾರ್ಟಿಗಳನ್ನು ಕೊಡಿಸುತ್ತಾ ದೇಶದ ಬಗ್ಗೆ ಕಾಳಜಿ ಇರುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.
ಆರಂಭದಲ್ಲಿ ಶಿಕ್ಷಣ ಸುಧಾರಣೆಯ ಸೋಗಿನಲ್ಲಿ ಜೆನ್ ಝೀ ಅಂದರೆ ಇಂದಿನ ಯುವ ಪೀಳಿಗೆಯನ್ನು ಒಟ್ಟುಗೂಡಿಸಿದ್ದ ಈ ತಂಡ, ಇದೀಗ ಶಿಕ್ಷಣದ ವಿಚಾರವನ್ನು ಸಂಪೂರ್ಣವಾಗಿ ಮರೆತು ಮತದಾರರ ಪಟ್ಟಿ ಪರಿಷ್ಕರಣೆ ಅಂದರೆ ಎಸ್ಐಆರ್ ವಿರುದ್ಧದ ಹೋರಾಟಕ್ಕೆ ಧುಮುಕಿದೆ. ಇದೆಲ್ಲದರ ನಡುವೆ, ತಮ್ಮ ಶಬ್ದಕೋಶದಲ್ಲಿರುವ ಎಲ್ಲಾ ಪದಗಳನ್ನು ಬಳಸಿಕೊಂಡು ಬಿಜೆಪಿ, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರನ್ನು ನಿಂದಿಸುವುದನ್ನೇ ದಿನಚರಿ ಮಾಡಿಕೊಂಡಿರುವ ಧ್ರುವ್ ರಾಠಿಗೆ ಪ್ರಧಾನಿ ಮೋದಿ ಅವರ ಹೆಸರೇ ಕಾಮಧೇನುವಾಗಿ ಪರಿಣಮಿಸಿದೆ.
ಕೇವಲ ಮೂರು ವಿಡಿಯೋಗಳಿಂದ 217 ಮಿಲಿಯನ್ ವೀಕ್ಷಣೆ
ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಧ್ರುವ್ ರಾಠಿ ಮಾಡಿರುವ ಯುಟ್ಯೂಬ್ ವಿಡಿಯೋಗಳು ದಾಖಲೆ ಪ್ರಮಾಣದ ವೀಕ್ಷಣೆ ಕಂಡಿವೆ. ಅದರಲ್ಲೂ ಪ್ರಮುಖವಾದ ಕೇವಲ ಮೂರೇ ಮೂರು ವಿಡಿಯೋಗಳು ಬರೋಬ್ಬರಿ 217 ಮಿಲಿಯನ್ಗೂ ಅಧಿಕ ವೀಕ್ಷಣೆ ಪಡೆದುಕೊಂಡಿವೆ. ಈ ಮೂರು ವಿಡಿಯೋಗಳಿಂದಲೇ ಯುಟ್ಯೂಬ್ ಮೂಲಕ ಅವರಿಗೆ 2 ಕೋಟಿ ರೂಪಾಯಿಗಳಿಗೂ ಅಧಿಕ ಹಣ ಹರಿದುಬಂದಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಮೋದಿ ಮೂರನೇ ಬಾರಿ ಗೆದ್ದಾಗ ಹೊಡೆಯಿತು ಜಾಕ್ಪಾಟ್
ವಾಸ್ತವವಾಗಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗುವ ಮೊದಲು ಧ್ರುವ್ ರಾಠಿ ಯಾರೆಂಬುದೇ ಜನರಿಗೆ ತಿಳಿದಿರಲಿಲ್ಲ. ಮೋದಿ ಅವರ ಮೊದಲ ಅವಧಿಯ ಆಡಳಿತದಲ್ಲೂ ಇವರು ಅಷ್ಟಾಗಿ ಪ್ರಚಾರಕ್ಕೆ ಬಂದಿರಲಿಲ್ಲ. ಆದರೆ ಮೋದಿ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದಾಗ ಇವರ ಅಳಲು ಆರಂಭವಾಯಿತು. ಯಾವಾಗ ಮೋದಿ ಸತತ ಮೂರನೇ ಬಾರಿಯೂ ಪ್ರಧಾನಿಯಾಗಿ ಆಯ್ಕೆಯಾದರೋ, ಆಗ ಧ್ರುವ್ ರಾಠಿಗೆ ಅಕ್ಷರಶಃ ಲಾಟರಿ ಹೊಡೆಯಿತು.
ಮೋದಿ ವಿರುದ್ಧ ವಿಡಿಯೋ ಮಾಡಿದರೆ ತಮ್ಮ ಬೆಂಬಲಿಗರು ಮಾತ್ರವಲ್ಲದೆ, ಮೋದಿ ಅವರನ್ನು ಪ್ರೀತಿಸುವವರು ಮತ್ತು ವಿರೋಧಿಸುವವರು ಕೂಡ ಕುತೂಹಲದಿಂದ ನೋಡುತ್ತಾರೆ ಎಂಬ ವ್ಯಾಪಾರಿ ತಂತ್ರಗಾರಿಕೆಯನ್ನು ಅರಿತುಕೊಂಡೇ ಅವರು ಒಂದರ ಮೇಲೊಂದು ವಿಡಿಯೋಗಳನ್ನು ಹರಿಬಿಟ್ಟರು. ರಾಜಕೀಯವಾಗಿ ಮೋದಿ ಅವರನ್ನು ವಿರೋಧಿಸುವುದೇ ಇಂದು ಧ್ರುವ್ ರಾಠಿ ಅವರ ಪಾಲಿಗೆ ಕೋಟಿ ಕೋಟಿ ರೂಪಾಯಿ ತಂದುಕೊಡುವ ಬೃಹತ್ ಆದಾಯದ ಮೂಲವಾಗಿ ಮಾರ್ಪಟ್ಟಿದೆ.







