ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಇಂದು ಮತ್ತೊಂದು ಡಬಲ್ ಹೆಡ್ಡರ್ ನಡೆಯುತ್ತಿದ್ದು, ಕಳೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ನೆದರ್ಲೆಂಡ್ಸ್ ಇದೀಗ ಶ್ರೀಲಂಕಾ ಸವಾಲು ಎದುರಿಸಲು ಸಜ್ಜಾಗಿದ್ದರೆ. ಹಿಂದಿನ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿರುವ ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ 2ನೇ ಪಂದ್ಯದಲ್ಲಿ ಮುಖಾಮುಖಿ ಆಗುತ್ತಿವೆ.
ಇಂದಿನ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿ ಆಗುತ್ತಿವೆ. ಕಳೆದ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ರೋಚಕ ಗೆಲುವು ಸಾಧಿಸಿರುವ ನೆದರ್ಲೆಂಡ್ಸ್ ಗೆಲುವಿನ ಆತ್ಮವಿಶ್ವಾದಲ್ಲಿದೆ. ಹೀಗಾಗಿ ಆಡಿರುವ ಮೂರು ಪಂದ್ಯಗಳಲ್ಲಿ ಸೋಲಿನ ಸುಳಿಗೆ ಸಿಲುಕಿರುವ ಶ್ರೀಲಂಕಾ ವಿರುದ್ಧ ಮತ್ತೊಂದು ಜಯಭೇರಿ ಬಾರಿಸುವ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಉಭಯ ತಂಡಗಳ ನಡುವಿನ ಹಣಾಹಣಿಗೆ ಲಕ್ನೋದಲ್ಲಿ ವೇದಿಕೆ ಸಜ್ಜಾಗಿದೆ.
ಟೂರ್ನಿಯಲ್ಲಿ ಸತತ ಎರಡು ಸೋಲು ಕಂಡಿದ್ದ ನೆದರ್ಲೆಂಡ್ಸ್, ನಂತರ ನಡೆದ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಅಚ್ಚರಿ ಮೂಡಿಸಿತ್ತು. ಸಂಘಟಿತ ಪ್ರದರ್ಶನದಿಂದ ಬಲಿಷ್ಠ ಆಫ್ರಿಕನ್ನರಿಗೆ ಮಣ್ಣುಮುಕ್ಕಿಸಿದ್ದ ನೆದರ್ಲೆಂಡ್ಸ್, ಇದೇ ನಿರೀಕ್ಷೆಯೊಂದಿಗೆ ಶ್ರೀಲಂಕಾ ತಂಡದ ವಿರುದ್ಧ ಜಯದ ನಗೆಬೀರುವ ಲೆಕ್ಕಾಚಾರದಲ್ಲಿದೆ. ಮತ್ತೊಂದೆಡೆ ಟೂರ್ನಿಯಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಸೋಲಿನ ಆಘಾತ ಕಂಡಿರುವ ಶ್ರೀಲಂಕಾ, ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ತಂಡದ ಬ್ಯಾಟಿಂಗ್ ಉತ್ತಮವಾಗಿದ್ದರು, ಬೌಲಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡದಿರುವುದು ತಂಡದ ಸೋಲಿಗೆ ಕಾರಣವಾಗಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆದ್ದು, ಗೆಲುವಿನ ಹಾದಿ ಕಂಡುಕೊಳ್ಳುವ ಲೆಕ್ಕಾಚಾರದಿಂದ ಲಂಕನ್ನರು ಕಣಕ್ಕಿಳಿಯಲಿದ್ದಾರೆ.
ಪಂದ್ಯದ ಸಮಯ: ಬೆಳಗ್ಗೆ 10.30ಕ್ಕೆ
ಇಂಗ್ಲೆಂಡ್ v ಸೌತ್ ಆಫ್ರಿಕಾ ಹಣಾಹಣಿ:
ಟೂರ್ನಿಯಲ್ಲಿ ಎದುರಾದ ಅಚ್ಚರಿಯ ಸೋಲಿನಿಂದ ಕಂಗೆಟ್ಟಿರುವ ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ ತಂಡಗಳು ಕಮ್‌ಬ್ಯಾಕ್ ಮಾಡುವ ತವಕದಲ್ಲಿದೆ. ಉಭಯ ತಂಡಗಳ ನಡುವಿನ ಜಿದ್ದಾಜಿದ್ದಿನ ಹಣಾಹಣಿಗೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವೇದಿಕೆ ಸಜ್ಜಾಗಿದ್ದು, ಇಂದಿನ ಪಂದ್ಯಕ್ಕಾಗಿ ಎರಡು ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ.
ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನದ ಸ್ಪಿನ್ನರ್‌ಗಳ ದಾಳಿಗೆ ತತ್ತರಿಸಿದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್, ಆಡಿರುವ ಮೂರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರವೇ ಗೆಲುವು ಸಾಧಿಸಿದ್ದು, ಉಳಿದ 2 ಪಂದ್ಯಗಳಲ್ಲಿ ಸೋಲಿನ ಆಘಾತ ಕಂಡಿದೆ. ಹೀಗಾಗಿ 3 ಪಂದ್ಯಗಳಲ್ಲಿ 2 ಅಂಕ ಪಡೆದಿರುವ ಇಂಗ್ಲೆಂಡ್, ಟೂರ್ನಿಯ ಮುಂದಿನ ಹಂತಕ್ಕೇರಲು ಗೆಲುವು ಅನಿವಾರ್ಯವಾಗಿದೆ. ಆದರೆ ಇದಕ್ಕಾಗಿ ಸೌತ್ ಆಫ್ರಿಕಾ ವಿರುದ್ಧ ಸಂಘಟಿತ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದೆ.
ಮತ್ತೊಂದೆಡೆ ಟೂರ್ನಿಯಲ್ಲಿ ಅದ್ಭುತ ಆರಂಭ ಕಂಡಿದ್ದ ಸೌತ್ ಆಫ್ರಿಕಾ, ಕಳೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಸೋಲಿನ ಆಘಾತ ಕಂಡಿದೆ. ಹೀಗಾಗಿ ಟೂರ್ನಿಯ ಮುಂದಿನ ಹಂತಕ್ಕೇರಲು ತೆಂಬಾ ಬವುಮಾ ಪಡೆ ಇಂಗ್ಲೆಂಡ್ ವಿರುದ್ಧ ಗೆದ್ದು ಕಮ್‌ಬ್ಯಾಕ್ ಮಾಡಬೇಕಾದ ಒತ್ತಡದಲ್ಲಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಬಲಿಷ್ಠವಾಗಿರುವ ಸೌತ್ ಆಫ್ರಿಕಾ ತನ್ನ ಹಿಂದಿನ ಪಂದ್ಯದ ತಪ್ಪುಗಳಿಂದ ಎಚ್ಚತ್ತುಕೊಳ್ಳಬೇಕಿದೆ. ಎರಡು ತಂಡಗಳಲ್ಲಿ ಯಾರಿಗೆ ಗೆಲುವು ಲಭಿಸಿದರು, ಸೆಮಿಫೈನಲ್ ರೇಸ್‌ನಲ್ಲಿ ಜೀವಂತ ಉಳಿಯಲು ಅನುಕೂಲವಾಗಲಿದೆ.
ಪಂದ್ಯದ ಸಮಯ: ಮಧ್ಯಾಹ್ನ 2ಕ್ಕೆ
CWC 2023, England, South Africa, Netherlands, Sri Lanka