ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವೈಫಲ್ಯ ಕಂಡಿರುವ ಹಾಲಿ ಚಾಂಪಿಯನ್ಸ್ ಇಂಗ್ಲೆಂಡ್, ಸೋಲಿನ ಸುಳಿಯಲ್ಲಿ ಸಿಲುಕುವ ಮೂಲಕ ಭಾರೀ ನಿರಾಸೆ ಅನುಭವಿಸಿದೆ.
ಟೂರ್ನಿ ಆರಂಭಕ್ಕೂ ಮುನ್ನ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದ್ದ ಇಂಗ್ಲೆಂಡ್, ಭಾರೀ ನಿರೀಕ್ಷೆ ಮೂಡಿಸಿತ್ತು. ಆದರೆ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ನ್ಯೂಜಿ಼ಲೆಂಡ್ ವಿರುದ್ಧ 9 ವಿಕೆಟ್‌ಗಳ ಭಾರೀ ಅಂತರದ ಸೋಲು ಆಂಗ್ಲರಿಗೆ ದೊಡ್ಡ ಶಾಕ್ ನೀಡಿತು. ಆದರೆ ನಂತರ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡುವ ಭರವಸೆ ಹೊಂದಿದ್ದ ಇಂಗ್ಲೆಂಡ್, ನಿರೀಕ್ಷೆಯಂತೆ ಬಾಂಗ್ಲಾದೇಶದ ವಿರುದ್ಧ 137 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.
ಆದರೆ ಇದೇ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿದ ಕ್ರಿಕೆಟ್ ಜನಕರಿಗೆ, ಕ್ರಿಕೆಟ್ ಲೋಕದಲ್ಲಿ ಇನ್ನು ಕಲಿಕೆಯ ಹಾದಿಯಲ್ಲಿರುವ ಅಫ್ಘಾನಿಸ್ತಾನ ತಂಡ ದೊಡ್ಡ ಶಾಕ್ ನೀಡಿತು. ದೆಹಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಅಫ್ಘಾನ್ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 69 ರನ್‌ಗಳ ಹೀನಾಯ ಸೋಲು ಕಂಡಿತು. ಅಫ್ಘಾನಿಸ್ತಾನದ ವಿರುದ್ಧ ಎದುರಾದ ಈ ಸೋಲು ಸಹಜವಾಗಿ ಇಂಗ್ಲೆಂಡ್ ತಂಡದ ಆತ್ಮವಿಶ್ವಾಸವನ್ನ ಕುಗ್ಗುವಂತೆ ಮಾಡಿತು.
ಆದರೆ ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ ಎಂಬ ಲೆಕ್ಕಾಚಾರದಲ್ಲಿ ಸೌತ್ ಆಫ್ರಿಕಾ ವಿರುದ್ಧ ತನ್ನ 4ನೇ ಪಂದ್ಯದಲ್ಲಿ ಕಣಕ್ಕಿಳಿದ ಇಂಗ್ಲೆಂಡ್, ಈ ಪಂದ್ಯದಲ್ಲೂ ಸಹ ತನ್ನ ಹಿಂದಿನ ತಪ್ಪುಗಳಿಂದ ಪಾಠ ಕಲಿಯಲಿಲ್ಲ. ಬೌಲಿಂಗ್‌ನಲ್ಲಿ ದುಬಾರಿ ರನ್‌ಬಿಟ್ಟುಕೊಟ್ಟ ಇಂಗ್ಲೆಂಡ್, ಬ್ಯಾಟಿಂಗ್‌ನಲ್ಲಿ ಸಹ ನೀರಸ ಪ್ರದರ್ಶನ ನೀಡಿತು. ಹೀಗಾಗಿ ಸೌತ್ ಆಫ್ರಿಕಾದ ಸಂಘಟಿತ ಪ್ರದರ್ಶನಕ್ಕೆ ಶರಣಾದ ಹಾಲಿ ಚಾಂಪಿಯನ್ಸ್, 229 ರನ್‌ಗಳ ಭಾರೀ ಅಂತರದ ಸೋಲಿನ ನಿರಾಸೆ ಅನುಭವಿಸಿದರು.
ಇದರೊಂದಿಗೆ ಟೂರ್ನಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಸೋಲು ಹಾಗೂ ಒಂದು ಗೆಲುವು ಕಂಡಿರುವ ಇಂಗ್ಲೆಂಡ್, -1.248ರ ನೆಟ್ ರನ್‌ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ. ತಂಡದ ಈ ನೀರಸ ಪ್ರದರ್ಶನದಿಂದಾಗಿ ಟೂರ್ನಿಯ ಸೆಮಿಫೈನಲ್ ಹಾದಿ ಕೂಡ ಕಠಿಣವಾಗಿದೆ. ಆದರೆ ಸೋಲಿನ ಸುಳಿಯಿಂದ ಹೊರ ಬರುವ ನಿರೀಕ್ಷೆ ಹೊಂದಿರುವ ಇಂಗ್ಲೆಂಡ್, ತನ್ನ ಮುಂದಿನ ಪಂದ್ಯದಲ್ಲಿ ಅ.25ರಂದು ಬೆಂಗಳೂರಿನಲ್ಲಿ ಶ್ರೀಲಂಕಾ ತಂಡವನ್ನ ಎದುರಿಸಲಿದೆ.
World Cup, England, ODI Cricket, Jos Buttler,