ಪಟ್ನಾ: ತನ್ನ ಪತ್ನಿಯ ಹೊಟ್ಟೆಯಲ್ಲಿ ಹೆಣ್ಣು ಮಗು ಇದೆ ಎಂಬುವುದು ಗೊತ್ತಾಗುತ್ತಿದ್ದಂತೆ ಪಾಪಿ ಗಂಡ ಕೊಲೆ ಮಾಡಿರುವ ಘಟನೆ ನಡೆದಿದೆ.
ಪತ್ನಿ (Wife) ಹೆಣ್ಣು ಮಗುವಿಗೆ ಜನ್ಮ ನೀಡಲಿದ್ದಾಳೆ ಎಂಬುವುದು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೂಲಕ ತಿಳಿದ ನಂತರ ಆಕೆಯ ಪತಿ ಹಾಗೂ ಅತ್ತೆ ಸೇರಿ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಈ ಘಟನೆ ಬಿಹಾರದಲ್ಲಿ ನಡೆದಿದೆ.
ಮೃತ ಮಹಿಳೆಗೆ ಈಗಾಗಲೇ ಒಂದು ಹೆಣ್ಣು ಹಾಗೂ ವಿಕಲಚೇತನ ಗಂಡು ಮಗುವಿದ್ದು, ಮತ್ತೆ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ ಎಂದು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಹತ್ಯೆ ಮಾಡಿದ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಂತೆ ಬಿಂಬಿಸಲು ನೇಣು ಬಿಗಿಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಘಟನೆ ನಂತರ ಆಕೆಯ ಪತಿ ಉದಯ್ ಚೌಹಾಣ್ ಹಾಗೂ ಆತನ ತಾಯಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಮಕ್ಕಳು ಅಳುವುದನ್ನು ನೋಡಿ ಸ್ಥಳೀಯರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.