ಕಂಪಾಲಾ: ಭಾರತ (India) ಮೂಲದ ಸ್ವಿಸ್ ಉದ್ಯಮಿ ಪಂಕಜ್ ಓಸ್ವಾಲ್ (Pankaj Oswal) ಅವರ ಮಗಳನ್ನು ಉಗಾಂಡಾದಲ್ಲಿ (Uganda) ಅಕ್ರಮವಾಗಿ ಬಂಧಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಮಧ್ಯಪ್ರವೇಶಿಸುವಂತೆ ಓಸ್ವಾಲ್ ವಿಶ್ವಸಂಸ್ಥೆಗೆ (United Nations) ಮೇಲ್ಮನವಿ ಸಲ್ಲಿಸಿದ್ದಾರೆ. ವಸುಂಧರಾ ಓಸ್ವಾಲ್ (26) ಅವರನ್ನು ಉಗಾಂಡಾದ ಎಕ್ಸ್‌ಟ್ರಾ-ನ್ಯೂಟ್ರಲ್ ಆಲ್ಕೋಹಾಲ್ (ENA) ಸ್ಥಾವರದಿಂದ ಅ.1 ರಂದು ಬಂಧಿಸಿ ಸುಮಾರು 20 ಶಸ್ತ್ರಸಜ್ಜಿತ ಪೊಲೀಸರು ಯಾವುದೇ ವಾರಂಟ್ ತೋರಿಸದೆ ಬಂಧಿಸಿದ್ದಾರೆ. ಅವರ ಬಂಧನ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಮಧ್ಯೆ ಪ್ರವೇಶಿಸುವಂತೆ ಈ ವಾರದ ಆರಂಭದಲ್ಲಿ ಯುನೈಟೆಡ್ ನೇಷನ್ಸ್ ವರ್ಕಿಂಗ್ ಗ್ರೂಪ್ ಆನ್ ಆರ್ಬಿಟ್ರರಿ ಡಿಟೆನ್ಶನ್‌ಗೆ (WGAD) ಪಂಕಜ್ ಓಸ್ವಾಲ್ ತುರ್ತು ಮನವಿ ಮಾಡಿದ್ದಾರೆ.
ವಸುಂಧರಾ ಅವರ ಇನ್ಸ್ಟಾಗ್ರಾಮ್‌ನಲ್ಲಿ ಅವರ ʻಕಾನೂನುಬಾಹಿರ ಬಂಧನʼ ವಿಚಾರವನ್ನು ಪೋಸ್ಟ್ ಮಾಡಲಾಗಿದೆ. ಪೋಸ್ಟ್‌ನಲ್ಲಿ ನೆಲದ ಮೇಲೆ ರಕ್ತ ಮತ್ತು ಗಲೀಜಾಗಿರುವ ಶೌಚಾಲಯದ ಫೋಟೋ ಹಂಚಲಾಗಿದೆ. ಬಂಧನದ ಸಂದರ್ಭದಲ್ಲಿ 90ಕ್ಕೂ ಅಧಿಕ ಗಂಟೆಗಳ ಕಾಲ ಶೂಗಳಿಂದ ತುಂಬಿದ ಕೋಣೆಯಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಲಾಗಿದೆ. ಸುಮಾರು ಐದು ದಿನಗಳವರೆಗೆ ಸ್ನಾನ ಮಾಡಲು ಅಥವಾ ಬಟ್ಟೆ ಬದಲಾಯಿಸಲು ಅನುಮತಿ ನೀಡಿಲ್ಲ ಎನ್ನಲಾಗಿದೆ. ಶುದ್ಧ ನೀರು ಮತ್ತು ಸರಿಯಾದ ಆಹಾರ ನಿರಾಕರಿಸಲಾಗಿದೆ. ಮಲಗಲು ಸಣ್ಣ ಬೆಂಚ್ ನೀಡಲಾಗಿದೆ ಎಂದು ಪೊಸ್ಟ್‌ನಲ್ಲಿ ಉಲ್ಲೇಖಿಸಿ ಆರೋಪಿಸಲಾಗಿದೆ.