ಪ್ರಸಕ್ತ ವಿಶ್ವಕಪ್‌ನಲ್ಲಿ ಅದ್ಭುತ ಬ್ಯಾಟಿಂಗ್ ಫಾರ್ಮ್ ಹೊಂದಿರುವ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಇಂಗ್ಲೆಂಡ್ ವಿರುದ್ಧದ ಮತ್ತೊಂದು ಬಿಗ್ ಮ್ಯಾಚ್‌ಗಾಗಿ ಸಜ್ಜಾಗಿದ್ದಾರೆ.
ಕ್ರಿಕೆಟ್ ಜನಕರ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಕಿಂಗ್ ಕೊಹ್ಲಿ, ಮತ್ತೊಂದು ಅವಿಸ್ಮರಣೀಯ ಇನ್ನಿಂಗ್ಸ್ ಆಡುವ ತವಕದಲ್ಲಿದ್ದಾರೆ. ಹಾಲಿ ಚಾಂಪಿಯನ್ನರ ವಿರುದ್ಧ ಈವರೆಗೂ 35 ಏಕದಿನ ಪಂದ್ಯಗಳನ್ನ ಆಡಿರುವ ಚೇಸ್ ಮಾಸ್ಟರ್ ಕೊಹ್ಲಿ, 43.22ರ ಬ್ಯಾಟಿಂಗ್ ಸರಾಸರಿಯಲ್ಲಿ 1340 ರನ್‌ಗಳನ್ನ ಬಾರಿಸಿದ್ದಾರೆ. ಕೊಹ್ಲಿಯ ಈ ಪ್ರದರ್ಶನದಲ್ಲಿ 3 ಶತಕ ಹಾಗೂ 9 ಅರ್ಧಶತಕಗಳು ಒಳಗೊಂಡಿದೆ.
ಈ ನಡುವೆ ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಕಿಂಗ್ ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಟೂರ್ನಿಯಲ್ಲಿ ಈವರೆಗೂ ಆಡಿರುವ 5 ಪಂದ್ಯಗಳಲ್ಲಿ 118ರ ಸರಾಸರಿಯಲ್ಲಿ ರನ್‌ಕಲೆಹಾಕಿರುವ ಚೇಸ್ ಮಾಸ್ಟರ್ ಕೊಹ್ಲಿ, 354 ರನ್‌ಗಳಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ರನ್‌ಗಳಿಸಿದ ಬ್ಯಾಟರ್‌ಗಳ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಕೊಹ್ಲಿ ಅವರ ಈ ಪ್ರದರ್ಶನದಲ್ಲಿ ಒಂದು ಶತಕ ಹಾಗೂ ಮೂರು ಅರ್ಧಶತಕ ಒಳಗೊಂಡಿದ್ದು, ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಅಬ್ಬರಿಸುವ ನಿರೀಕ್ಷೆ ಮೂಡಿಸಿದ್ದಾರೆ.
ಪ್ರಸಕ್ತ ಟೂರ್ನಿಯಲ್ಲಿ ಜಯದ ಅಲೆಯಲ್ಲಿ ತೇಲುತ್ತಿರುವ ಭಾರತ, ಆಡಿರುವ ಐದು ಪಂದ್ಯಗಳಲ್ಲಿ ಐದು ಪಂದ್ಯವನ್ನ ಗೆದ್ದು ಯಶಸ್ಸಿನ ಅಲೆಯಲ್ಲಿದೆ. ಟೀಂ ಇಂಡಿಯಾದ ಈ ಯಶಸ್ಸಿನಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರವನ್ನವಹಿಸಿದ್ದಾರೆ. ಈ ನಡುವೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಈ ಬಾರಿಯ ವಿಶ್ವಕಪ್‌ನಲ್ಲಿ ನಿರೀಕ್ಷೆ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಸೋಲಿನ ಸುಳಿಯಲ್ಲಿ ಸಿಲುಕಿರುವ ಆಂಗ್ಲರ ವಿರುದ್ಧ ತಮ್ಮ ಬ್ಯಾಟಿಂಗ್ ಅಬ್ಬರ ಮುಂದುವರಿಸಲು ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ಅ.29ರ ಭಾನುವಾರ ಲಕ್ನೋದಲ್ಲಿ ನಡೆಯಲಿದೆ.
CWC 2023, Team India, England, Virat Kohli, World Cup