ಏಕದಿನ ವಿಶ್ವಕಪ್ನಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಜಯದ ಅಲೆಯಲ್ಲಿ ತೇಲುತ್ತಿರುವ ಟೀಂ ಇಂಡಿಯಾ, ಅ.29ರಂದು ನಡೆಯುವ ಇಂಗ್ಲೆಂಡ್ ವಿರುದ್ಧದ ಮತ್ತೊಂದು ರೋಚಕ ಹಣಾಹಣಿಗೆ ಸಜ್ಜಾಗಿದೆ. ಈ ನಡುವೆ ಭಾರತ ತಂಡದ ಪ್ರಮುಖ ವೇಗದ ಬೌಲರ್ ಮೊಹಮ್ಮದ್ ಶಮಿ ಸಹ ಹಾಲಿ ಚಾಂಪಿಯನ್ನರ ವಿರುದ್ಧದ ಕದನಕ್ಕೆ ತಯಾರಾಗಿದ್ದಾರೆ.
ವಿಶ್ವಕಪ್ನ ಆರಂಭಿಕ ನಾಲ್ಕು ಪಂದ್ಯಗಳಿಂದ ಹೊರಗುಳಿದಿದ್ದ ಸ್ಟಾರ್ ವೇಗದ ಬೌಲರ್, ನ್ಯೂಜಿ಼ಲೆಂಡ್ ವಿರುದ್ಧ ಆಡುವ ಅವಕಾಶ ಪಡೆದರು. ಅಲ್ಲದೇ ತಮಗೆ ದೊರೆತ ಅವಕಾಶದ ಸಂಪೂರ್ಣ ಲಾಭ ಪಡೆದ ಶಮಿ, ಕಿವೀಸ್ ವಿರುದ್ಧ ಆಕ್ರಮಣಕಾರಿ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದ ಗೆಲುವಿನ ಹೀರೋ ಆಗಿ ಮಿಂಚಿದರು. ಇದೀಗ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಭರ್ಜರಿ ತಯಾರಿಯೊಂದಿಗೆ ಸಜ್ಜಾಗಿದ್ದಾರೆ.
ಹಾಲಿ ಚಾಂಪಿಯನ್ನರ ವಿರುದ್ಧ ಅತ್ಯುತ್ತಮ ದಾಖಲೆ ಹೊಂದಿರುವ ಮೊಹಮ್ಮದ್ ಶಮಿ, ಎಲ್ಲಾ ಫಾರ್ಮ್ಯಾಟ್ಗಳಲ್ಲಿ ಈವರೆಗೂ ಆಡಿರುವ 31 ಪಂದ್ಯಗಳಲ್ಲಿ 68 ವಿಕೆಟ್ ಪಡೆಯುವ ಮೂಲಕ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಪ್ರಮುಖವಾಗಿ ಏಕದಿನ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಮೊಹಮ್ಮದ್ ಶಮಿ ಸಂಪೂರ್ಣ ಪ್ರಾಬಲ್ಯ ಮೆರೆದಿದ್ದು, 14 ಪಂದ್ಯಗಳಲ್ಲಿ 21 ವಿಕೆಟ್ಗಳನ್ನ ಪಡೆದು ಮಿಂಚಿದ್ದಾರೆ.
ಅಲ್ಲದೇ ಇಂಗ್ಲೆಂಡ್ ವಿರುದ್ಧ 25.28ರ ಬೌಲಿಂಗ್ ಸರಾಸರಿ ಹೊಂದಿದ್ದು, 5ರ ಎಕಾನಮಿ ಹೊಂದಿದ್ದಾರೆ. ಇದೇ ಆತ್ಮವಿಶ್ವಾಸದೊಂದಿಗೆ ಇಂಗ್ಲೆಂಡ್ ವಿರುದ್ಧದ ಮತ್ತೊಂದು ಪಂದ್ಯದಲ್ಲಿ ಕಣಕ್ಕಿಳಿಯಲು ತಯಾರಾಗಿರುವ ಮೊಹಮ್ಮದ್ ಶಮಿ, ಕಳೆದ ಪಂದ್ಯದಲ್ಲಿ ನ್ಯೂಜಿ಼ಲೆಂಡ್ ವಿರುದ್ಧ ಭರ್ಜರಿ 5 ವಿಕೆಟ್ ಕಬಳಿಸಿ ಮಿಂಚಿದ್ದು, ಹಾಲಿ ಚಾಂಪಿಯನ್ನರ ವಿರುದ್ಧ ಕೂಡ ಇದೇ ಫಾರ್ಮ್ ಮುಂದುವರಿಸುವ ತವಕದಲ್ಲಿದ್ದಾರೆ.
IND v ENG, Team India, England, Mohammed Shami, World Cup