ಬೆಳಗಾವಿ: ಪತಿಯ ಕುಡಿತಕ್ಕೆ ಬೇಸತ್ತು ಪತ್ನಿಯೇ ಕೊಲೆ ಮಾಡಿ ಹೃದಯಾಘಾತದ ಕಥೆ ಕಟ್ಟಿರುವುದನ್ನು ಪೊಲೀಸರು ಬೇಧಿಸಿದ್ದಾರೆ.
ಈ ಘಟನೆ ಜಿಲ್ಲೆಯ ಖಾನಾಪುರ(Khanapur) ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಬಾಬು ಮನೆಯಲ್ಲಿ ಮಲಗಿರುವಾಗಲೇ ಶವವಾಗಿದ್ದ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಬಂದಿದ್ದರು. ಆದರೆ, ಪೊಲೀಸರು ಸೇರಿದಂತೆ ಅಲ್ಲಿಗೆ ಬಂದಿದ್ದ ಸ್ಥಳೀಯರು, ಸಂಬಂಧಿಕರಿಗೆ ಇದು ಸಹಜ ಸಾವು ಅಲ್ಲ ಅನಿಸಿತ್ತು. ಏಕೆಂದರೆ, ಬಾಬು ಕೊರಳಲ್ಲಿ ಗಾಯದ ಗುರುತಿತ್ತು. ಹೀಗಾಗಿ ಸಂಶಯಗೊಂಡ ಪೊಲೀಸರು ಶವವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ, ಅದರ ಸತ್ಯ ಅರಿಯಲು ಮುಂದಾಗಿದ್ದರು.
ರೈತನಾಗಿದ್ದ ಬಾಬುಗೆ ಕಳೆದ 16 ವರ್ಷಗಳ ಹಿಂದೆ ಮದುವೆಯಾಗಿತ್ತು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಈ ಕುಟುಂಬಕ್ಕೆ 40 ಎಕರೆ ಜಮೀನು ಇತ್ತು. ಆದರೆ, ಬಾಬು ಕುಡಿತದ ದಾಸನಾಗಿದ್ದ. ಹೀಗಾಗಿ ಹಣ ಸಾಲುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಜಮೀನು ಮಾರುತ್ತಿದ್ದ. ಹೀಗೆ ಬರೋಬ್ಬರಿ 14 ಎಕರೆ ಜಮೀನನ್ನು ಮಾರಿದ್ದ. ಮತ್ತೆ ಮಾರಾಟ ಮಾಡಲು ಮುಂದಾಗಿದ್ದ. ಇದು ಪತ್ನಿಗೆ ಇಷ್ಟವಿರಲಿಲ್ಲ. ಈತ ಹೀಗೆ ಜಮೀನು ಮಾರುತ್ತಿದ್ದರೆ, ಮಕ್ಕಳು ಬೀದಿಗೆ ಬರುತ್ತಾರೆ ಎಂದು,ಊಟದಲ್ಲಿ ನಿದ್ರೆ ಮಾತ್ರೆ ಬೆರಸಿ ಕೊಟ್ಟಿದ್ದಾಳೆ. ಕುಡಿದ ನಶೆಯಲ್ಲಿದ್ದ ಬಾಬು ಗಾಢ ನಿದ್ದೆಯಲ್ಲಿದ್ದಾಗ ಕತ್ತಿಗೆ ಹಗ್ಗ ಬಿಗಿದು ಉಸಿರು ನಿಲ್ಲಿಸಿದ್ದಾಳೆ.
ಆನಂತರ ಹಾರ್ಟ್ ಅಟ್ಯಾಕ್ ಎಂದು ಬಿಂಬಿಸಲು ಯತ್ನಿಸಿದ್ದಾಳೆ. ಸದ್ಯ ಪೊಲೀಸರು ಪ್ರಕರಣ ಬೇಧಿಸಿ, ಮಹಿಳೆಯನ್ನು ಜೈಲಿಗೆ ಅಟ್ಟಿದ್ದಾರೆ.








