ಆಧಾರ್ ಕಾರ್ಡ್ ಕಳೆದುಕೊಂಡಿದ್ದೀರಾ – ಹಾಗಿದ್ದರೆ ಈ ಮಾಹಿತಿ ನೋಡಿ
ಹೊಸದಿಲ್ಲಿ, ಜೂನ್ 23: ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದ್ದರೆ ಮತ್ತು ಅದನ್ನು ಮೂಲ ರೂಪದಲ್ಲಿ ಪಡೆಯಲು ಬಯಸಿದರೆ, ಯುಐಡಿಎಐ ಈ ಸೌಲಭ್ಯವನ್ನು ಒದಗಿಸುತ್ತದೆ. ಆಧಾರ್ ಕಾರ್ಡ್ ಹೊಂದಿರುವವರಿಗೆ ‘ಆಧಾರ್ ಮರುಮುದ್ರಣ’ ಆಯ್ಕೆ ಲಭ್ಯವಿದ್ದು, ದೇಶದ 60 ಲಕ್ಷಕ್ಕೂ ಹೆಚ್ಚು ಮಂದಿ ‘ಆರ್ಡರ್ ಆಧಾರ್ ಮರುಮುದ್ರಣ’ ಸೌಲಭ್ಯವನ್ನು ಬಳಸಿ ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ ಎಂದು ಇತ್ತೀಚೆಗೆ ಯುಐಡಿಎಐ ಟ್ವೀಟ್ ಮಾಡಿದೆ.
ಯುಐಡಿಎಐ ವೆಬ್ಸೈಟ್ ಮತ್ತು ಎಂಆಧಾರ್ ಆ್ಯಪ್ ಮೂಲಕ ಆಧಾರ್ ಕಾರ್ಡ್ ಅನ್ನು ಮರು ಮುದ್ರಣ ಮಾಡಿಕೊಳ್ಳಬಹುದು. ಆಧಾರ್ ಮರುಮುದ್ರಣಕ್ಕೆ ನೀವು ಅರ್ಜಿ ಸಲ್ಲಿಸಲು, ನಿಮ್ಮ ಆಧಾರ್ ಸಂಖ್ಯೆ ಅಥವಾ ವರ್ಚುವಲ್ ಗುರುತಿನ ಸಂಖ್ಯೆ ಅಂದರೆ ವಿಐಡಿ ಇದ್ದರೆ ಸಾಕು. ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ನಲ್ಲಿ ನೋಂದಾಯಿಸದೇ ಇದ್ದರೂ ಸಹ ನೀವು ಆಧಾರ್ ಕಾರ್ಡ್ ಅನ್ನು ಮರುಮುದ್ರಣ ಮಾಡಿಕೊಳ್ಳಬಹುದು. ನೀವು ಮೊಬೈಲ್ ಸಂಖ್ಯೆ ನಮೂದಿಸಿದೇ ಇದ್ದ ಪಕ್ಷದಲ್ಲಿ ನೋಂದಾಯಿಸದ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿಯನ್ನು ಪಡೆದು ಆಧಾರ್ ಕಾರ್ಡ್ ಪಡೆಯಲು ಆಯ್ಕೆ ಕೂಡ ಇದೆ.
ಆಧಾರ್ ಮರುಮುದ್ರಣ ಪಡೆಯಲು 50 ರೂ.ಗಳ ಶುಲ್ಕವನ್ನು ಪಾವತಿಸಬೇಕಾಗಿದ್ದು, ಇದು ಜಿಎಸ್ಟಿ ಮತ್ತು ಸ್ಪೀಡ್ ಪೋಸ್ಟ್ ಚಾರ್ಜ್ ಅನ್ನು ಒಳಗೊಂಡಿದೆ. ಆಧಾರ್ ಕಾರ್ಡುದಾರರ ನೋಂದಾಯಿತ ವಿಳಾಸಕ್ಕೆ ಮರುಮುದ್ರಣಗೊಂಡ ಆಧಾರ್ ಕಾರ್ಡ್ ಅನ್ನು ಸ್ಪೀಡ್ ಪೋಸ್ಟ್ ಮೂಲಕ 15 ದಿನಗಳಲ್ಲಿ ತಲುಪಿಸಲಾಗುತ್ತದೆ.
ಆಧಾರ ಕಾರ್ಡ್ ಮರುಮುದ್ರಣ ಪ್ರಕಿಯೆ
1. ಮೊದಲು www.uidai.gov.in ನಲ್ಲಿನ ‘ಮೈ ಆಧಾರ್’ ವಿಭಾಗ’ಕ್ಕೆ ಹೋಗಿ
2. ಬಳಿಕ ‘ ಆರ್ಡರ್ ಆಧಾರ್ ರೀಪ್ರಿಂಟ್ ಮೇಲೆ ‘ ಕ್ಲಿಕ್ ಮಾಡಿ.
3. ಆಧಾರ್ ಸಂಖ್ಯೆ ಅಥವಾ ವಿಐಡಿ ಮತ್ತು ಭದ್ರತಾ ಕೋಡ್ ಅನ್ನು ನಮೂದಿಸಿ.
4. ಆಧಾರ್ ಕಾರ್ಡ್ ನಲ್ಲಿ ಅರ್ಜಿದಾರರ ಮೊಬೈಲ್ ಸಂಖ್ಯೆ ನೋಂದಾಯಿಸಿದ್ದರೆ, ಸೆಂಡ್ ಒಟಿಪಿ ಕ್ಲಿಕ್ ಮಾಡಿ.
5. ಮೊಬೈಲ್ ಸಂಖ್ಯೆ ನೋಂದಾಯಿಸದೇ ಇದ್ದ ಪಕ್ಷದಲ್ಲಿ ನೋಂದಾಯಿಸದ ಮೊಬೈಲ್ ಸಂಖ್ಯೆಯ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ. ಇದರ ನಂತರ, ಸೆಂಡ್ ಒಟಿಪಿ ಕ್ಲಿಕ್ ಮಾಡಿ.
6. ಮೊಬೈಲ್ ಸಂಖ್ಯೆಗೆ ಬಂದಿರುವ ಒಟಿಪಿಯನ್ನು ನಮೂದಿಸಿ
7. ನಿಯಮಗಳು ಮತ್ತು ಷರತ್ತುಗಳನ್ನು ಓದಿ ಮತ್ತು ಅದರ ಮುಂದಿರುವ ಬಾಕ್ಸ್ ಅನ್ನು ಟಿಕ್ ಮಾಡಿ.
8. ನಂತರ ಆಧಾರ್ ಮರುಮುದ್ರಣದ ಪೂರ್ವವೀಕ್ಷಣೆ (ಪ್ರೀವ್ಯೂ ಷೋ) ಮಾಡಬಹುದಾಗಿದ್ದು, ಇದು ನೋಂದಾಯಿಸಿದ ಮೊಬೈಲ್ ಸಂಖ್ಯೆ ಹೊಂದಿರುವವರಿಗೆ ಮಾತ್ರ ಲಭ್ಯ.
9. ಪೂರ್ವವೀಕ್ಷಣೆಯಲ್ಲಿನ ವಿವರಗಳನ್ನು ಪರಿಶೀಲಿಸಿದ ಬಳಿಕ , ‘ಮೇಕ್ ಪೇಮೆಂಟ್ ‘ ಮೇಲೆ ಕ್ಲಿಕ್ ಮಾಡಿ.
10. ಇಲ್ಲಿ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಸಹಾಯದಿಂದ ನೀವು ಹಣವನ್ನು ಪಾವತಿಸಬಹುದಾಗಿದೆ.
11. ಹಣ ಪಾವತಿಸಿದ ಬಳಿಕ ರಶೀದಿ ಸಂಖ್ಯೆ, ಎಸ್ಆರ್ಎನ್, ಪಾವತಿಸಿದ ದಿನಾಂಕ ಮತ್ತು ಸಮಯ, ವಹಿವಾಟು ಐಡಿ ಮುಂತಾದ ವಿವರಗಳನ್ನು ನಿಮಗೆ ನೀಡಲಾಗುತ್ತದೆ. ಅಷ್ಟೇ ಅಲ್ಲ ಏಕ್ನಾಲೆಜ್ಮೆಂಟ್ ಸ್ಲಿಪ್ ಅನ್ನು ಡೌನ್ಲೋಡ್ ಮಾಡುವ ಆಯ್ಕೆಯೂ ಕೂಡ ಇರುತ್ತದೆ.
ನೀವು ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಎಸ್ಆರ್ಎನ್ ವಿವರಗಳೊಂದಿಗೆ ಎಸ್ಎಂಎಸ್ ಬರುತ್ತದೆ. ಇದರಿಂದ ನೀವು ನಿಮ್ಮ ಆಧಾರ್ ಕಾರ್ಡ್ ಸ್ಟೇಟಸ್ ಅನ್ನು ಚೆಕ್ ಮಾಡಬಹುದು.
ಆಧಾರ್ ಕಾರ್ಡ್ ಮರುಮುದ್ರಣಕ್ಕೆ ಅರ್ಜಿ ಸಲ್ಲಿಸಿದ ಬಳಿಕ, ನಿಮ್ಮ ಅರ್ಜಿಯ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಬಹುದಾಗಿದ್ದು ಯುಐಡಿಎಐ ವೆಬ್ಸೈಟ್ನಲ್ಲಿರುವ ಮೈ ಅಧಾರ್’ ವಿಭಾಗದಲ್ಲಿರುವ ‘ ಆರ್ಡರ್ ಆಧಾರ್ ರಿಪ್ರಿಂಟ್’ ಆಯ್ಕೆಯ ಕೆಳಗೆ ‘ಆಧಾರ್ ರಿಪ್ರಿಂಟ್ ಸ್ಟೇಟಸ್’ ಎಂಬ ಆಯ್ಕೆ ಲಭ್ಯವಿದೆ.
ಅಥವಾ https://resident.uidai.gov.in/check-reprint-status ಮೂಲಕವೂ ಆಧಾರ್ ರಿಪ್ರಿಂಟ್ ಸ್ಟೇಟಸ್ ಪ್ರವೇಶಿಸಬಹುದು. ಆಧಾರ್ ಮರುಮುದ್ರಣ ಸ್ಥಿತಿಯನ್ನು ಪರಿಶೀಲಿಸಲು, ನಿಗದಿತ ಜಾಗದಲ್ಲಿ ಎಸ್.ಆರ್.ಎನ್, ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಿ, ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಆಧಾರ್ ಮರುಮುದ್ರಣದ ಸ್ಟೇಟಸ್ ಅನ್ನು ಪರಿಶೀಲಿಸಬಹುದಾಗಿದೆ.