ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡುವ ಬಗ್ಗೆ ಚರ್ಚೆಗಳು ಶುರುವಾಗಿವೆ. ಈ ವಿಷಯದ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ”ಲಾಕ್ ಡೌನ್ ವ್ಯಾಪಕವಾದ ಚರ್ಚೆ ಆಗ್ತಿದೆ. ಸಿಎಂ ಕೂಡ ಎಲ್ಲ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡ್ತಿದ್ದಾರೆ. ಲಾಕ್ ಡೌನ್ ಓಪನ್ ಆದ್ಮೇಲೆ ಏನೆಲ್ಲಾ ನಡೆಯುತ್ತಿದೆ ಅನ್ನೋದನ್ನ ಕೂಡ ಗಮನಿಸಲಾಗ್ತಿದೆ. ಮತ್ತೆ ಲಾಕ್ ಡೌನ್ ಮಾಡಬೇಕಾ ಅಥವಾ ಬೇಡವೇ ಅನ್ನೋದನ್ನ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಾರೆ” ಎಂದು ತಿಳಿಸಿದ್ದಾರೆ.
ಇನ್ನು ಕ್ಯಾಬಿನೆಟ್ ನಲ್ಲಿ ಲಾಕ್ ಡೌನ್ ಬಗ್ಗೆ ಚರ್ಚೆ ಮಾಡಬೇಕಾ..? ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಬೇಕಾ ಅಥವಾ ಟಾಸ್ಕ್ ಫೋರ್ಸ್ ಕಮೀಟಿ ಜೊತೆ ಚರ್ಚೆ ಮಾಡಬೇಕಾ ಅನ್ನೋದರ ಬಗ್ಗೆ ಸಿಎಂ ಬಿಎಸ್ ವೈ ತೀರ್ಮಾನ ಮಾಡ್ತಾರೆ. ಕೊರೊನಾ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಮಾಡಬೇಕಾ..? ಬೇಡ್ವಾ.? ಅನ್ನೋ ಅಭಿಪ್ರಾಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತೆ ಎಂದು ಬೊಮ್ಮಾಯಿ ಹೇಳಿದ್ದಾರೆ.








