ನವದೆಹಲಿ: ಜ. 22ರಂದು ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭದ ನೇರ ಪ್ರಸಾರ ವೀಕ್ಷಣೆಗೆ ರಾಜಧಾನಿ ದೆಹಲಿಯಾದ್ಯಂತ ಸುಮಾರು 14 ಸಾವಿರ ದೇವಾಲಯಗಳಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಕರ್ನೈಲ್ ಸಿಂಗ್ ಹೇಳಿದ್ದಾರೆ.
ಮಂದಿರ ಉದ್ಘಾಟನಾ ಸಮಾರಂಭವನ್ನು ನೇರ ಪ್ರಸಾರದ ಮೂಲಕ ಸುಮಾರು 30 ಲಕ್ಷ ಜನರು ವೀಕ್ಷಿಸಲಿದ್ದು, ಪ್ರತಿಯೊಂದು ದೇವಸ್ಥಾನದಲ್ಲಿ 200ರಷ್ಟು ಜನರು ಸೇರುವ ನಿರೀಕ್ಷೆ ಇದೆ. 14 ಸಾವಿರ ದೇವಾಲಯಗಳ ಅರ್ಚಕರು ಮನೆ ಮನೆಗೆ ತೆರಳಿ ಅಕ್ಷತೆ ನೀಡಿ, ಜ. 22ರಂದು ಹತ್ತಿರದ ದೇವಾಲಯಗಳಿಗೆ ಭೇಟಿ ನೀಡಿ ರಾಮ ಪ್ರಾಣ ಪ್ರತಿಷ್ಠಾಪನೆಯ ನೇರ ಪ್ರಸಾರ ವೀಕ್ಷಿಸುವಂತೆ ಆಹ್ವಾನ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಉದ್ಘಾಟನೆಯನ್ನು ಐತಿಹಾಸಿಕ ದಿನವನ್ನಾಗಿ ಮಾಡುವುದಕ್ಕಾಗಿ ಜ. 20ರಂದು ದೆಹಲಿಯ ಕರ್ನಲ್ ರಸ್ತೆಯಲ್ಲಿನ ಖಾತು ಶ್ಯಾಮ ದೇವಸ್ಥಾನದಲ್ಲಿ 1.08 ಲಕ್ಷ ದೀಪಗಳನ್ನು ಬೆಳಗಿಸಲಾಗುವುದು. ಅಲ್ಲದೇ, ಜ. 17ರಂದು ಅರ್ಚಕರಿಂದ ಬೈಕ್ ರ್ಯಾಲಿ ನಡೆಯಲಿದೆ ಎಂದು ಹೇಳಿದ್ದಾರೆ.








