ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಶ್ರೀನಿವಾಸಾಚಾರ್ಯ ದಿನೇಶ್ ಕುಮಾರ್ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಸೇರಿದಂತೆ ಹಲವರು ಇದ್ದರು.
ಶ್ರೀನಿವಾಸಾಚಾರ್ಯ ದಿನೇಶ್ ಕುಮಾರ್ ಅವರು, 2015 ರಲ್ಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಹಾಗೂ 2016ರಲ್ಲಿ ಕಾಯಂ ನ್ಯಾಯಾಧೀಶರಾಗಿ ನೇಮಕಗೊಂಡರು. ನ್ಯಾಯಮೂರ್ತಿ ಕುಮಾರ್ ಅವರನ್ನು 1998 ರಲ್ಲಿ ಕೇಂದ್ರ ಸರ್ಕಾರದ ಹೆಚ್ಚುವರಿ ಸ್ಥಾಯಿ ವಕೀಲರಾಗಿ ಹಾಗೂ 2003 ರಲ್ಲಿ ಹಿರಿಯ ಸ್ಥಾಯಿ ವಕೀಲರಾಗಿ ನೇಮಿಸಲಾಗಿತ್ತು.
ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ), ಬಿಎಸ್‌ಎನ್‌ಎಲ್, ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ), ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮಿಷನ್ (ಯುಜಿಸಿ), ಅಖಿಲ ಭಾರತ ತಾಂತ್ರಿಕ ಶಿಕ್ಷಣ (ಎಐಸಿಟಿಇ), ರಾಷ್ಟ್ರೀಯ ವಕೀಲರ ಹಿರಿಯ ಸ್ಥಾಯಿ ಸಲಹೆಗಾರರಾಗಿ ಕೂಡ ಅವರು ಸೇವೆ ಸಲ್ಲಿಸಿದ್ದಾರೆ.








