ಗದಗ: ಕಾಂಗ್ರೆಸ್ ಮುಖಂಡರೊಬ್ಬರ ಹೆಸರು ಬರೆದಿಟ್ಟು ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ರೋಣ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ನಡೆದಿದ್ದು, ಡಾ. ಶಶಿಧರ ಹಟ್ಟಿ ಎಂಬ ವೈದ್ಯರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮರಳು ದಂಧೆಯಲ್ಲಿ ಪಾಲುದಾರಾಗಿದ್ದ ಶರಣಗೌಡ ಪಾಟೀಲ್ ಹಾಗೂ ವೈದ್ಯರ ಮಧ್ಯೆ ಉಂಟಾದ ಹಣಕಾಸಿನ ಒತ್ತಡಕ್ಕೆ ವೈದ್ಯ ಬಲಿಯಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೂರು ತಿಂಗಳ ಹಿಂದೆ ರೋಣ ತಾಲೂಕಿನ ಹೊಳೆಮಣ್ಣೂರು ಹತ್ತಿರ ಮರಳಿನ ಪಾಯಿಂಟ್ ಮಾಡಿಕೊಂಡಿದ್ದರು. ರಾಜು ಶಿರಗುಂಪಿ, ಅಶೋಕ ವಾಸವಿ ಶೆಟ್ಟರ್, ಗಜೇಂದ್ರಗಡ ತಾಲೂಕಿನ ಸರ್ಜಾಪೂರ ಗ್ರಾಮದ ಶರಣಗೌಡ ಎಲ್ ಪಾಟೀಲ ಹಾಗೂ ಕೆಲವರ ಜೊತೆ ವೈದ್ಯ ಶಶಿಧರ ಮರಳು ವ್ಯವಹಾರ ಮಾಡುತ್ತಿದ್ದರು ಎನ್ನಲಾಗಿದೆ.
ಆದರೆ, ಆರೋಪಿ ಶರಣಗೌಡ ಪಾಟೀಲ, ವೈದ್ಯ ಶಶಿಧರಗೆ ಪ್ರತಿ ದಿನ ಮರಳಿನ ವ್ಯವಹಾರದ ಲೆಕ್ಕ ಕೊಡುವಂತೆ ಒತ್ತಡ ಹಾಕುತ್ತಿದ್ದ ಎಂದು ಮಾನಸಿಕ ಕಿರುಕುಳ ನೀಡುತ್ತಾ ಬಂದಿದ್ದ ಎಂದು ಶಶಿಧರ್ ಹಟ್ಟಿ ಆರೋಪಿಸಿದ್ದಾರೆ. ಡೈರಿಯ ಮೊದಲ ಪುಟದಲ್ಲಿ ದನದಾಹಿ ಶರಣಗೌಡನಿಗೆ ಧಿಕ್ಕಾರ, ದನ ಪಿಶಾಚಿ ಶರಣಗೌಡನಿಗೆ ಬೋಮ್ಮಸಾಗರ ದುರ್ಗಮ್ಮನ ಶಾಪ ತಟ್ಟಲಿ. ಬಸಪ್ಪ ಒಳಗೆ ವಿಷಪ್ಪನಾದ ಶರಣಗೌಡನೇ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ ಬರೆದು ಆರೋಪಿಸಿದ್ದಾರೆ. ಸದ್ಯ ವೈದ್ಯರ ಪತ್ನಿ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








