ಜೈಪುರ : ತುರ್ತು ಪರಿಸ್ಥಿತಿ ವಿಚಾರವಾಗಿ ನಿನ್ನೆ ಕಾಂಗ್ರೆಸ್ ವಿರುದ್ಧ ಟ್ವಿಟ್ಟರ್ ನಲ್ಲಿ ಕಿಡಿಕಾರಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗರಂ ಆಗಿದ್ದಾರೆ.
ಬಿಜೆಪಿ ಟೀಕೆ ವಿಚಾರವಾಗಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ಗೆಹ್ಲೋಟ್, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಟ್ವೀಟ್ ಗಳಲ್ಲಿ ಗೆಹ್ಲೋಟ್, ಬಿಜೆಪಿ ನಾಯಕರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಮತ್ತು ಕಾಂಗ್ರೆಸ್ ಪಕ್ಷದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರಶ್ನಿಸಲು ಯೋಗ್ಯರಲ್ಲ ಎಂದು ಕಿಡಿಕಾರಿದ್ದಾರೆ.
‘ಮೋದಿ ಮತ್ತು ಅಮಿತ್ ಶಾ , ಇತರ ನಾಯಕರು ಉಸಿರಾಡದಂತೆ ಬಿಜೆಪಿ ಮತ್ತು ಎನ್‌ಡಿಎ ಸರ್ಕಾರವನ್ನು ಹೈಜಾಕ್ ಮಾಡಿದ್ದಾರೆ. ‘ಮೂರು, ನಾಲ್ಕು ಸಚಿವರನ್ನು ಬಿಟ್ಟು ಉಳಿದಂತೆ ಮೋದಿ ಸಂಪುಟದಲ್ಲಿ ಯಾರೆಲ್ಲ ಇದ್ದಾರೆ ಎಂಬುದೇ ಸಾರ್ವಜನಿಕರಿಗೆ ತಿಳಿದಿಲ್ಲ ಎಂಬುದು ಆಘಾತಕಾರಿ’ ಎಂದು ಗುಡುಗಿದ್ದಾರೆ.
ನಿನ್ನೆ ತುರ್ತು ಪರಿಸ್ಥಿತಿ ಸಂದರ್ಭದ ಕುರಿತು ಸರಣಿ ಟ್ವೀಟ್ ಮಾಡಿದ್ದ ಅಮಿತ್ ಶಾ, ಒಂದು ಕುಟುಂಬದ ಹಿತಾಸಕ್ತಿ ಕಾಂಗ್ರೆಸ್ ಪಕ್ಷವನ್ನು ಬಾಧಿಸುತ್ತಿದೆ. ಈಗಲೂ ಆ ಪಕ್ಷದಲ್ಲಿ ತುರ್ತು ಪರಿಸ್ಥಿತಿ ಮನಸ್ಥಿತಿಯೇ ಏಕಿದೆ..? ಕಾಂಗ್ರೆಸ್‌ನಲ್ಲಿ ಮುಖಂಡರಿಗೆ ಉಸಿರುಗಟ್ಟುವ ಸ್ಥಿತಿ ಇರುವುದು ಕಹಿಯಾದ ಸತ್ಯ’ ಎಂದು ಹೇಳಿದ್ದರು.






