ಲಾಹೋರ್: ಪಾಕ್ ನಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ಪುತ್ರಿ ಈಗ ಮೊದಲ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ಪಿಎಂಎಲ್-ಎನ್ ನಾಯಕಿ ಮರ್ಯಮ್ ನವಾಜ್ ಪಾಕ್ ನ ಪಂಜಾಬ್ ಪ್ರಾಂತ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. 12 ಕೋಟಿ ಜನ ಇರುವ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ಇಮ್ರಾನ್ ಖಾನ್ ಅವರ ಪಿಟಿಐ ಬೆಂಬಲಿತ ಪಕ್ಷದ ಬಸುನ್ನಿ ಇತ್ತೆಹಾದ್ ಕೌನ್ಸಿಲ್ ನಾಯಕ ರಾಣಾ ಅಫ್ತಾಬ್ ವಿರುದ್ಧ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷದ ಮರ್ಯಮ್ (50) ಗೆಲುವು ಸಾಧಿಸಿದ್ದರು. ಈ ಕುರಿತು ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.
50 ವರ್ಷದ ಮರ್ಯಮ್ ಪಾಕ್ ನಲ್ಲಿ 3 ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ಪುತ್ರಿ. 1992ರಲ್ಲಿ, ಅವರು ಸಫರ್ ಅವನ್ ಎಂಬವರೊಂದಿಗೆ ವಿವಾಹವಾಗಿದ್ದರು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಸಫರ್ ಆ ಸಮಯದಲ್ಲಿ ಪಾಕಿಸ್ತಾನದ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ನವಾಜ್ ಷರೀಫ್ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರದಲ್ಲಿದ್ದಾಗ ಭದ್ರತಾ ಅಧಿಕಾರಿಯಾಗಿದ್ದರು. ಆರಂಭದಿಂದಲೇ ತನ್ನನ್ನು ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಮರ್ಯಮ್ 2012ರಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.








