ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಈಗ 2029ರ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿ ವಿಚಾರವಾಗಿ ದೊಡ್ಡ ಮಟ್ಟದ ಸಂಘರ್ಷ ಶುರುವಾಗಿದೆ. ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮತ್ತು ಕಾಂಗ್ರೆಸ್ ನಡುವಿನ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ರಾಹುಲ್ ಗಾಂಧಿ ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕಾಂಗ್ರೆಸ್ ಸಚಿವರು ಎಚ್ಚರಿಕೆ ನೀಡಿದ್ದಾರೆ.
ನಟ ಹಾಗೂ ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಪಕ್ಷವು 2029ರ ಚುನಾವಣೆಯಲ್ಲಿ ವಿಜಯ್ ಅವರನ್ನೇ ರಾಷ್ಟ್ರ ರಾಜಕಾರಣದ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಸಿದ್ಧತೆ ನಡೆಸುತ್ತಿದೆ. ಟಿವಿಕೆ ನಾಯಕರಾದ ಆಧವ್ ಅರ್ಜುನ ಮತ್ತು ಶರತ್ ಕುಮಾರ್ ಅವರು ಈ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವುದು ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಕನ್ಯಾಕುಮಾರಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ತಮಿಳುನಾಡು ಪ್ರವಾಸೋದ್ಯಮ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎಸ್ ರಾಜೇಶ್ ಕುಮಾರ್, ವಿಜಯ್ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ. 2029ರ ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ ಅವರೇ ನಮ್ಮ ಪ್ರಧಾನಿ ಅಭ್ಯರ್ಥಿ. ಒಂದು ವೇಳೆ ಟಿವಿಕೆ ಪಕ್ಷವು ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಒಪ್ಪಿಕೊಳ್ಳದಿದ್ದರೆ, ಸರ್ಕಾರದಲ್ಲಿರುವ ಇಬ್ಬರು ಕಾಂಗ್ರೆಸ್ ಸಚಿವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಗುಡುಗಿದ್ದಾರೆ.
ನಮಗೆ ಅಧಿಕಾರ ಅಥವಾ ಸಚಿವ ಸ್ಥಾನಕ್ಕಿಂತ ನಮ್ಮ ಪಕ್ಷ ಮತ್ತು ರಾಹುಲ್ ಗಾಂಧಿ ಅವರ ನಾಯಕತ್ವವೇ ಮುಖ್ಯ. ಹೈಕಮಾಂಡ್ ಆದೇಶ ನೀಡಿದ ಕ್ಷಣವೇ ನಾವು ಕುರ್ಚಿಯಿಂದ ಕೆಳಗಿಳಿಯಲು ಸಿದ್ಧರಿದ್ದೇವೆ. ಇದರಲ್ಲಿ ಯಾವುದೇ ಮರುಮಾತಿಲ್ಲ ಎಂದು ರಾಜೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಇವರಿಗೆ ಉನ್ನತ ಶಿಕ್ಷಣ ಸಚಿವ ಪಿ ವಿಶ್ವನಾಥನ್ ಕೂಡ ಸಾಥ್ ನೀಡಿದ್ದು, ರಾಹುಲ್ ಗಾಂಧಿ ಅವರೇ ದೇಶದ ಮುಂದಿನ ಪ್ರಧಾನಿ ಎಂಬ ನಿಲುವಿನಲ್ಲಿ ನಾವೆಲ್ಲರೂ ಅಚಲವಾಗಿದ್ದೇವೆ ಎಂದಿದ್ದಾರೆ.
ಮತ್ತೊಂದೆಡೆ ವಿಜಯ್ ಅವರನ್ನು ರಾಷ್ಟ್ರೀಯ ಮಟ್ಟದ ನಾಯಕನನ್ನಾಗಿ ಮಾಡುವ ಕನಸು ಕಾಣುತ್ತಿರುವ ಟಿವಿಕೆ ಪಾಳಯದಲ್ಲಿ ಈ ಹೇಳಿಕೆಗಳು ಸಂಚಲನ ಮೂಡಿಸಿವೆ. ಮೈತ್ರಿ ಪಕ್ಷಗಳ ನಡುವಿನ ಈ ಮೇಲಾಟವು ಈಗ ತಮಿಳುನಾಡು ಸರ್ಕಾರದ ಅಸ್ತಿತ್ವದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಜಯ್ ಅವರ ರಾಷ್ಟ್ರೀಯ ಮಹತ್ವಾಕಾಂಕ್ಷೆ ಮತ್ತು ರಾಹುಲ್ ಗಾಂಧಿ ಅವರ ನಾಯಕತ್ವದ ನಡುವಿನ ಈ ಸಂಘರ್ಷ ಮುಂದಿನ ದಿನಗಳಲ್ಲಿ ಯಾವ ರಾಜಕೀಯ ತಿರುವು ಪಡೆದುಕೊಳ್ಳಲಿದೆ ಎಂಬುದು ಕುತೂಹಲಕಾರಿಯಾಗಿದೆ. ಸದ್ಯಕ್ಕೆ ಈ ಬಿಕ್ಕಟ್ಟು ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗುತ್ತದೆಯೇ ಅಥವಾ ಉಭಯ ಪಕ್ಷಗಳು ಒಂದು ಸಹಮತಕ್ಕೆ ಬರುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.







