ಬೆಂಗಳೂರು : ಸತತ 21 ದಿನಗಳಿಂದ ದೇಶದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಆಗುತ್ತಿರೋದನ್ನ ಖಂಡಿಸಿ ಎನ್ ಎಸ್ ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಕಚೇರಿ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಬಿಜೆಪಿಯ ಪ್ರಮುಖ ನಾಯಕರ ಭಾವಚಿತ್ರಗಳನ್ನು ದಹಿಸಿದರು. ಕೂಡಲೇ ತೈಲ ಬೆಲೆ ಇಳಿಸುವಂತೆ ಒತ್ತಾಯಿಸಿದರು.
ಈ ವೇಳೆ ಎನ್ ಎಸ್ ಯುಐ ರಾಜ್ಯಾಧ್ಯಕ್ಷ ಮಂಜುನಾಥಗೌಡ ಮಾತನಾಡಿ, ಕೊರೊನಾದಿಂದ ತತ್ತರಿಸಿರುವ ಈ ಸಮಯದಲ್ಲಿ ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡುವ ಬದಲು ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ. ಇದರಿಂದ ಜನರಿಗೆ ತೊಂದರೆಯಾಗಿದೆ. ನಾವು ಕಾರು, ಬೈಕುಗಳನ್ನು ಬಿಟ್ಟು ಸೈಕಲ್ ಎತ್ತಿನಗಾಡಿಯಲ್ಲಿ ಓಡಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದರು.
ದೇಶದಲ್ಲಿ ಇಂದೂ ಕೂಡ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿದೆ. ಇಂದಿನ ಬೆಲೆ ಪರಿಷ್ಕರಣೆಯ ನಂತರ ದೇಶದ ಪ್ರಮುಖ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 25 ಪೈಸೆ ಹೆಚ್ಚಾದರೆ, ಡೀಸೆಲ್ ಗೆ 21 ಪೈಸೆ ಏರಿಕೆಯಾಗಿದೆ.








