ಧರ್ಮಶಾಲಾ: ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪ್ಲೇ ಆಫ್ ಹಾದಿಯನ್ನು ಸುಗಮಗೊಳಿಸಿಕೊಂಡಿದೆ. ಪಂಜಾಬ್ ವಿರುದ್ಧ ಗೆಲುವು ಸಾಧಿಸುವುದರ ಮೂಲಕ ಕಿಂಗ್ಸ್ ತನ್ನ ಹಾದಿ ಸುಗಮ ಮಾಡಿಕೊಂಡಿದೆ.
ಚೆನ್ನೈ ತಂಡವು ಪಂಜಾಬ್ ವಿರುದ್ಧ 28 ರನ್ ಗಳ ಜಯ ಸಾಧಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತ್ತು. ಈ ಸಾಧಾರಣ ಗುರಿ ಬೆನ್ನಟ್ಟಿದ್ದ ಪಂಜಾಬ್ ಸ್ಪರ್ಧೆ ನೀಡದೆ ಸೋಲು ಕಂಡಿತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‍ಗಳನ್ನು ಕಳೆದುಕೊಂಡು 139 ರನ್ ಗಳಿಸಿತು.
ಚೆನ್ನೈ ಕೂಡ ರನ್ ಗಳಿಸಲು ಪರದಾಟ ನಡೆಸಿತು. ಅಜಿಂಕ್ಯ ರಹಾನೆ ಪಂದ್ಯದ ಎರಡನೇ ಓವರ್‌ನಲ್ಲೇ 9 ರನ್‍ಗಳಿಗೆ ಆರ್ಶದೀಪ್ ಸಿಂಗ್‍ಗೆ ವಿಕೆಟ್ ಒಪ್ಪಿಸಿದರು. ನಾಯಕ ಗಾಯಕ್ವಾಡ್ ಹಾಗೂ ಡೇರಿಲ್ ಮಿಚೆಲ್ 32 ಎಸೆತಗಳಲ್ಲಿ 57 ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಗಾಯಕ್ವಾಡ್ 32 ರನ್ ಗಳಿಸಿ ಔಟ್ ಆದರು. ಶಿವಂ ದುಬೆ ಒಂದೇ ಎಸೆತಕ್ಕೆ ಔಟಾದರು. ಡೇರಿಲ್ ಮಿಚೆಲ್ 30 ರನ್ ಗಳಿಸಿ ಹರ್ಷಲ್ ಪಟೇಲ್‍ಗೆ ವಿಕೆಟ್ ಒಪ್ಪಿಸಿದರು. ಧೋನಿ ಮೊದಲ ಬೌಲ್ ಗೆ ಡಕ್ ಆಗಿ 8 ವರ್ಷಗಳ ಬಳಿಕೆ ಕೆಟ್ಟ ದಾಖಲೆ ಬರೆದರು. ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ ರವೀಂದ್ರ ಜಡೇಜಾ 26 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 43 ರನ್ ಗಳಿಸಿ ತಂಡದ ಮೊತ್ತ ಏರಲು ಕಾರಣರಾದರು. ಪಂಜಾಬ್ ಪರ ರಾಹುಲ್ ಚಹಾರ್ 23 ರನ್ ನೀಡಿ 3 ಹಾಗೂ ಹರ್ಷಲ್ ಪಟೇಲ್ 24 ರನ್ ನೀಡಿ 3 ವಿಕೆಟ್ ಕಿತ್ತು ಮಿಂಚಿದರು.
ಚೆನ್ನೈ ನೀಡಿದ್ದ 168 ರನ್ ಗುರಿ ಬೆನ್ನತ್ತಿದ ಪಂಜಾಬ್ ಕೂಡ ಆರಂಭದಿಂದಲೂ ಕಳಪೆ ಪ್ರದರ್ಶನ ಮುಂದುವರೆಸಿತು. ಪ್ರಭಾಸಿಮ್ರಾನ್ ಸಿಂಗ್ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದ್ದರು. 30 ರನ್ ಗಳಿಸಿದ್ದಾಗ ಔಟ್ ಆದರು. ನಂತರ ಯಾವೊಬ್ಬ ಆಟಗಾರರೂ ಪ್ರತಿರೋಧ ಒಡ್ಡುವ ಪ್ರಯತ್ನ ಮಾಡಲಿಲ್ಲ. ರವೀಂದ್ರ ಜಡೇಜಾ 3 ವಿಕೆಟ್ ಕಿತ್ತು ಮಿಂಚಿದರು.