ಬೆಂಗಳೂರು: ಸಾಲ ತೀರಿಸುವುದಕ್ಕಾಗಿ ಯುವತಿಯೊಬ್ಬಳು ಮನೆ ಮಾಲಕಿಯನ್ನು ಹತ್ಯೆ ಮಾಡಿರುವ ಘಟನೆಯೊಂದು ನಡೆದಿದೆ.
ಮೋನಿಕಾ (24) ಬಂಧಿತ ಆರೋಪಿ. ಮೇ 10 ರಂದು ಕೆಂಗೇರಿ (Woman Murder Case Kengeri) ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ಈ ಘಟನೆ ನಡೆದಿದೆ. ಮೇ. 10ರಂದು ಈ ಘಟನೆ ನಡೆದಿದ್ದು, ಒಂಟಿ ಮಹಿಳೆಯ ಕೊಲೆಯಾಗಿತ್ತು. ಕಂಪನಿಯೊಂದರಲ್ಲಿ ಕಳೆದ ಒಂದು ವರ್ಷದಿಂದ ಡೇಟಾ ಎಂಟ್ರಿ ಕೆಲಸ ಮಾಡಿದ್ದ ಮೋನಿಕಾ ಮೂಲತಃ ಕೋಲಾರ ಜಿಲ್ಲೆಯವಳು ಎನ್ನಲಾಗಿದೆ. ಈಕೆ ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಳು.
ಮೋನಿಕಾ ಕೆಂಗೇರಿಯಲ್ಲಿ ಗುರುಮೂರ್ತಿ ಎಂಬುವವರ ಮನೆಯಲ್ಲಿ ಮೂರು ತಿಂಗಳ ಹಿಂದೆ ವಾಸವಿದ್ದಳು. ಪ್ರಿಯಕರನನ್ನೇ ತನ್ನ ಪತಿ ಎಂದು ಹೇಳಿದ್ದಳು. ಒಬ್ಬಂಟಿಯಾಗಿ ವಾಸವಿದ್ದ ಮೋನಿಕ ಮನೆಗೆ ಪ್ರಿಯಕರ ಆಗಾಗ ಬಂದು ಹೋಗುತ್ತಿದ್ದ. ಆದರೆ, ಆರೋಪಿ ಮೋನಿಕಾ ತುಂಬಾ ಸಾಲ ಮಾಡಿಕೊಂಡಿದ್ದಳು. ಪ್ರಿಯಕರನಿಗೆ ಟಾಟಾ ಏಸ್ ವಾಹನ ಖರೀದಿಸಲು ಹಣ ಬೇಕಾಗಿತ್ತು. ಹೀಗಾಗಿ ಮನೆ ಮಾಲಕಿ ದಿವ್ಯಾ ಮೈಮೇಲಿದ್ದ ಚಿನ್ನದ ಒಡವೆ ಮೇಲೆ ಮೋನಿಕಾ ಕಣ್ಣು ಹಾಕಿದ್ದಳು. ದಿವ್ಯ ಪತಿ ಗುರುಮೂರ್ತಿ ಕೆಂಗೇರಿ ಉಪನಗರದ ಶಿವನಪಾಳ್ಯದಲ್ಲಿ ಸಲೂನ್ ಶಾಪ್ ನಡೆಸುತ್ತಿದ್ದರು.
ಮನೆಯಲ್ಲಿ ದಿವ್ಯಾ ಹಾಗೂ 2 ವರ್ಷದ ಮಗು ಮಾತ್ರ ಇರುತ್ತಿತ್ತು. ಈ ಸಂದರ್ಭದಲ್ಲಿ ಹಿಂಬದಿಯಿಂದ ಬಂದು ಕುತ್ತಿಗೆ ಹಿಸುಕಿ ಮೋನಿಕಾ ಕೊಲೆ ಮಾಡಿ ಕುತ್ತಿಗೆಯಲ್ಲಿದ್ದ 36 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದಳು. ಸದ್ಯ ಪ್ರಕರಣ ಬೇಧಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.