ಇಂಗ್ಲೆಂಡ್ ತಂಡದ ನಾಯಕನಾಗಿರುವುದು ದೊಡ್ಡ ಗೌರವ – ಬೆನ್ ಸ್ಟೋಕ್ಸ್
ಇಂಗ್ಲೆಂಡ್ ತಂಡದ ನಾಯಕನಾಗಿ ಸಿಕ್ಕ ಅವಕಾಶ ನನ್ನ ಪಾಲಿಗೆ ದೊಡ್ಡ ಗೌರವ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್‍ರೌಂಡರ್ ಬೆನ್ ಸ್ಟೋಕ್ಸ್ ಅಭಿಪ್ರಾಯಪಟ್ಟಿದ್ದಾರೆ.
ಜುಲೈ 8ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಬೆನ್ ಸ್ಟೋಕ್ಸ್ ಮುನ್ನಡೆಸಲಿದ್ದಾರೆ. ಇಂಗ್ಲೆಂಡ್ ತಂಡದ ನಾಯಕನಾಗಿದ್ದ ಜಾಯ್ ರೂಟ್ ಅವರು ವೈಯಕ್ತಿಕ ಕಾರಣಗಳಿಂದಾಗಿ ಮೊದಲ ಟೆಸ್ಟ್ ಪಂದ್ಯದಿಂದ ವಂಚಿತರಾಗಲಿದ್ದಾರೆ. ಹೀಗಾಗಿ ಬೆನ್ ಸ್ಟೋಕ್ಸ್‍ಗೆ ಇಂಗ್ಲೆಂಡ್ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿದೆ.
ಹೊಡಿಬಡಿ ಆಟದ ಮೂಲಕ ಮಿಂಚು ಹರಿಸಿರುವ ಬೆನ್ ಸ್ಟೋಕ್ಸ್, ಇಂಗ್ಲೆಂಡ್ ತಂಡದ ನಾಯಕನಾಗುವುದು ದೊಡ್ಡ ಗೌರವ. ಅದು ಒಂದು ಬಾರಿಯಾದ್ರೂ ಸಾಕು. ಹಾಗಂತ ನಾನು ಮಹತ್ವಕಾಂಕ್ಷಿಯಲ್ಲ. ನಾಯಕನಾಗಬೇಕು ಅನ್ನೋ ಮಹಾದಾಸೆಯೂ ನನ್ನಲ್ಲಿ ಇಲ್ಲ. ಜಾಯ್ ರೂಟ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿದೆ ಎಂದು ಬೆನ್ ಸ್ಟೋಕ್ಸ್ ಹೇಳಿದ್ದಾರೆ.
ಬೆನ್ ಸ್ಟೋಕ್ಸ್ ಅವರು 2019ರ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾಗಂತ ನಾಯಕನಾಗಿ ತನ್ನ ಬದ್ಧತೆ ಮತ್ತು ಆಕ್ರಮಣಕಾರಿ ಪ್ರವೃತ್ತಿ ಮತ್ತು ಆಟದ ಶೈಲಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.
ಇನ್ನು ನಾಯಕನಾಗಿ ತಂಡದ ಹಿರಿಯ ಆಟಗಾರರ ಸಲಹೆಗಳನ್ನು ಪಡೆದುಕೊಳ್ಳುತ್ತೇನೆ. ತಂಡದಲ್ಲಿ ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್ ಮೊದಲಾದ ಹಿರಿಯ ಆಟಗಾರರು ಇದ್ದಾರೆ. ಪಂದ್ಯದಲ್ಲಿ ಅವರ ಮಾರ್ಗದರ್ಶನ ಹಾಗೂ ಸಲಹೆಗಳನ್ನು ಪಡೆದುಕೊಳ್ಳುತ್ತೇನೆ ಅಂತ ಬೆನ್ ಸ್ಟೋಕ್ಸ್ ಹೇಳಿದ್ದಾರೆ.
ಈಗಾಗಲೇ ಕೊವಿಡ್-19 ನಿಂದಾಗಿ ವಿಶ್ವಕ್ರಿಕೆಟ್ ಸ್ತಗಿತಗೊಂಡಿತ್ತು. ಇದೀಗ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಗೆ ನಾನು ಮತ್ತು ತಂಡದ ಆಟಗಾರರು ಸಾಕಷ್ಟು ತಯಾರಿಗಳನ್ನು ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ರು.