ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಈ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಸರಣಿ ಟ್ವೀಟ್ ಗಳ ಮೂಲಕ ಕೆಲ ಸಲಹೆಗಳನ್ನು ನೀಡಿದ್ದಾರೆ. ಜೊತೆಗೆ ಮುಖ್ಯಮಂತ್ರಿಗಳೇ ಈ ಕಡೆ ಗಮನಹರಿಸಿ, ಇದು ನ್ಯಾಯವಲ್ಲವೇ ಎಂದೆಲ್ಲ ಪ್ರಶ್ನಿಸಿ. ತಕ್ಷಣ ಸರ್ವಪಕ್ಷಗಳ ಪರಿಶೀಲನಾ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮೊದಲ ಟ್ವೀಟ್ ನಲ್ಲಿ ಸಿದ್ದರಾಮಯ್ಯ, ಕೊರೊನಾ ಚಿಕಿತ್ಸೆ ಬಗ್ಗೆ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಇದರ ಮೇಲೆ ನಿಗಾ ಇಡಲು ಬಿಎಸ್ ವೈ ಅವರು ತಕ್ಷಣ ಸರ್ವಪಕ್ಷಗಳ ಪರಿಶೀಲನಾ ಸಮಿತಿ ರಚಿಸಬೇಕು. ಪಕ್ಷಗಳಲ್ಲಿರುವ ವೃತ್ತಿನಿರತ ಮತ್ತು ವೈದ್ಯಕೀಯ ಶಿಕ್ಷಣ ಹೊಂದಿರುವ ನಾಯಕರನ್ನು ಇದರಲ್ಲಿ ಸೇರಿಸಿಕೊಳ್ಳಬಹುದು ಎಂದಿದ್ದಾರೆ.

ಎರಡನೇ ಟ್ವೀಟ್ ನಲ್ಲಿ..
ಕೊರೊನಾ ಚಿಕಿತ್ಸೆಗೆ ಮೀಸಲಿಟ್ಟಿರುವ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಿರ್ಲಕ್ಷ್ಯ, ತಾರತಮ್ಯ ನೀತಿ ಮತ್ತು ಭ್ರಷ್ಟಾಚಾರದ ಆರೋಪಗಳಿವೆ. ರಾಜಕೀಯ ಪ್ರಭಾವ ಬಳಸಿ ಬಲವಿದ್ದವರು ಬದುಕಿಕೊಳ್ಳುತ್ತಾರೆ, ಬಡವರಿಗೆ ದಿಕ್ಕಿಲ್ಲದಂತಹ ಸ್ಥಿತಿ. ಹೀಗಾಗಿ ಕರ್ನಾಟಕದ ಮುಖ್ಯಮಂತ್ರಿಗಳೇ ಈ ಕಡೆಗಮನ ಹರಿಸಿ ಎಂದು ಬರೆದುಕೊಂಡು ಸಿಎಂ ಆಫ್ ಕರ್ನಾಟಕಕ್ಕೆ ಟ್ಯಾಗ್ ಮಾಡಿದ್ದಾರೆ ಸಿದ್ದರಾಮಯ್ಯ.
ಮೂರನೇ ಟ್ವೀಟ್ ನಲ್ಲಿ.. ಸೋಂಕಿತರ ಪರ ಧ್ವನಿ ಎತ್ತಿರುವ ಸಿದ್ದರಾಮಯ್ಯ, ರೋಗಿಗಳಿಗೆ ತಾನು ಪಡೆಯುತ್ತಿರುವ ಚಿಕಿತ್ಸೆಯ ಸಂಪೂರ್ಣ ವಿವರ ಪಡೆಯುವ ಕಾನೂನುಬದ್ಧ ಹಕ್ಕಿದೆ. ಸೋಂಕಿತರಿಗೆ ನೀಡುತ್ತಿರುವ ಔಷಧಿ, ಅನುಸರಿಸುತ್ತಿರುವ ಚಿಕಿತ್ಸಾ ವಿಧಾನ ಏನು ಎಂಬುದನ್ನು ತಿಳಿಸದೆ ರೋಗಿಗಳನ್ನು ಕತ್ತಲಲ್ಲಿಡಲಾಗುತ್ತಿದೆ. ಬಿಎಸ್ ವೈ ಅವರೇ ಇದು ಅನ್ಯಾಯ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕೊನೆಯದಾಗಿ ಕೊನೆಯ ಟ್ವೀಟ್ ನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಅವಕಾಶ ಸ್ವಾಗತಾರ್ಹ ಕ್ರಮ ಎಂದಿರುವ ಸಿದ್ದರಾಮಯ್ಯ, ಚಿಕಿತ್ಸಾ ಶುಲ್ಕ ಕಡಿಮೆ ಮಾಡಲು ಒಪ್ಪಿರುವ ಖಾಸಗಿಯವರು ಚಿಕಿತ್ಸೆಯ ಗುಣಮಟ್ಟದಲ್ಲಿ ರಾಜಿಯಾಗದಂತೆ ನಿಗಾ ಇಡಬೇಕು. ಸೋಂಕಿತರಿಗೆ, ನೀಡುತ್ತಿರುವ ಔಷಧಿ ಮತ್ತು ಅನುಸರಿಸಲಾಗುತ್ತಿರುವ ಚಿಕಿತ್ಸಾ ವಿಧಾನದದ ಸಂಪೂರ್ಣ ಮಾಹಿತಿಯನ್ನು ಮೊದಲೇ ನೀಡಬೇಕು ಎಂದು ಒತ್ತಾಯಿಸಿದ್ದಾರೆ.








