ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಬಿಜೆಪಿಗೆ (BJP) ಸೋಲಾಗುವ ಮುನ್ಸೂಚನೆ ಪ್ರಧಾನಿ ನರೇಂದ್ರ ಮೋದಿಗೆ ಸಿಕ್ಕಿದೆ. ಹೀಗಾಗಿ ಅವರು ಏನೇನೋ ಮಾತನಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕಟುವಾಗಿ ಟೀಕಿಸಿದ್ದಾರೆ.
ನಗರದಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ನೆಹರು ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇವರನ್ನು ದೇವರೇ ವಿಕಸಿತ ಭಾರತ ನಿರ್ಮಾಣ ಮಾಡಲು ಕಳುಹಿಸಿರಬಹುದು. 2047ರ ತನಕ ಸೇವೆ ಮಾಡಲು ದೇವರು ಕಳುಹಿಸಿದ್ದಾನೆ ಎಂದು ಮೋದಿ ಹೇಳುತ್ತಾರೆ. ಮತಕ್ಕಾಗಿ ಹಿಂದೂ, ಮುಸ್ಲಿಮರನ್ನು ವಿಭಜಿಸುತ್ತಿದ್ದಾರೆ. ಚುನಾವಣಾ ಭಾಷಣಗಳಲ್ಲಿ ಮುಸ್ಲಿಮರ ವಿರುದ್ಧ ಮಾತನಾಡುತ್ತಾರೆ. ಪ್ರಧಾನಿಗೆ ಬಹುತ್ವದಲ್ಲಿ ನಂಬಿಕೆ ಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ರಾಷ್ಟ್ರ ಮಾಡುತ್ತೇವೆ ಅಂತಾರೆ. ಆದರೆ, ಮೋದಿಗೆ ಹಿಂದೂ ರಾಷ್ಟ್ರ ಕಟ್ಟಲು ಆಗುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲಿದೆ ಎಂದು ಭರವಸೆ ನೀಡಿದ್ದಾರೆ.
ಸುದ್ದಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಪ್ರಧಾನಿ ಮೋದಿ, ದೇವರು ನನ್ನನ್ನು ಒಂದು ಉದ್ದೇಶಕ್ಕಾಗಿ ಇಲ್ಲಿಗೆ ಕಳುಹಿಸಿದ್ದಾನೆ ಎಂಬುವುದು ನನಗೆ ಮನವರಿಕೆಯಾಗಿದೆ. ಹೀಗಾಗಿ ನಾನು ನಾನು ನನ್ನನ್ನು ಸಂಪೂರ್ಣವಾಗಿ ದೇವರಿಗೆ ಅರ್ಪಿಸಿಕೊಂಡಿದ್ದೇನೆ ಎಂದು ಹೇಳಿದ್ದರು. ಇದಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.