ಜಿನೀವಾ: ಭಾರತೀಯ ಕಾರ್ಮಿಕರನ್ನು ಶೋಷಣೆ ಮಾಡಿದ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಬ್ರಿಟನ್ ಶ್ರೀಮಂತ ಉದ್ಯಮ ಕುಟುಂಬವಾದ ಹಿಂದೂಜಾದ (Hinduja Family) ನಾಲ್ವರಿಗೆ ಸ್ವಿಸ್ ನ್ಯಾಯಾಲಯ (Swiss court) 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಪ್ರಕಾಶ್ ಹಿಂದೂಜಾ, (78), ಪತ್ನಿ ಕಮಲ್ (75) ಇವರಿಗೆ ತಲಾ ನಾಲ್ಕು ವರ್ಷ ಮತ್ತು ಆರು ತಿಂಗಳ ಶಿಕ್ಷೆ ಪ್ರಕಟಿಸಲಾಗಿದೆ. ಮಗ ಅಜಯ್ ಮತ್ತು ಅವರ ಪತ್ನಿ ನಮ್ರತಾಗೆ ತಲಾ ನಾಲ್ಕು ವರ್ಷ ಶಿಕ್ಷೆ ವಿಧಿಸಲಾಗಿದೆ. ಜಿನೀವಾದಲ್ಲಿ ಹೊಂದಿರುವ ಮಹಲಿನಲ್ಲಿ ಕೆಲಸಕ್ಕಿದ್ದವರನ್ನು ಶೋಷಣೆ ಮಾಡಿದ ಆರೋಪದಲ್ಲಿ ಈ ಶಿಕ್ಷೆ ಪ್ರಕಟಿಸಲಾಗಿದೆ. ಇದನ್ನು ಪ್ರಶ್ನಿಸಿರುವ ಹಿಂದೂಜಾ ಕುಟುಂಬ ಈಗ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಭಾರತದಿಂದ ಮನೆ ಕೆಲಸಕ್ಕೆಂದು ಜಿನೀವಾಗೆ ಕರೆದುಕೊಂಡು ಹೋದವರ ಪಾಸ್ ಪೋರ್ಟ್ ಗಳನ್ನು ಹಿಂದೂಜಾ ಕುಟುಂಬ ಮುಟ್ಟುಗೋಲು ಹಾಕಿಕೊಂಡಿತ್ತು ಎನ್ನಲಾಗಿದೆ. ಅಲ್ಲದೇ, ಕಾರ್ಮಿಕರ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದರು. ಜತೆಗೆ ಸಿಬ್ಬಂದಿಯನ್ನು ದುರುಪಯೋಗ ಪಡಿಸಿಕೊಂಡಿದ್ದರು ಎಂಬ ಆರೋಪಗಳ ಅಡಿ ದೂರು ದಾಖಲಾಗಿತ್ತು. ಹೀಗಾಗಿ ನ್ಯಾಯಾಲಾಯ ಶಿಕ್ಷೆ ವಿಧಿಸಿದೆ.
ಕಾರ್ಮಿಕ ಸಿಬ್ಬಂದಿಗಿಂತಲೂ ಸಾಕು ನಾಯಿಗೆ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ಜಿನೀವಾ ಪ್ರಾಸಿಕ್ಯೂಟರ್ ಯೆವ್ಸ್ ಬರ್ಟೊಸ್ಸಾ ಆರೋಪಿಸಿದ್ದರು. ಭಾರತೀಯ ಮೂಲದವರೇ ಆದ ಹಿಂದೂಜಾ ಕುಟುಂಬದ ಉದ್ಯಮ ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿದೆ. ಬ್ರಿಟನ್ ನಲ್ಲಿ ನೆಲೆ ನಿಂತಿರುವ ಹಿಂದೂಜಾ ಕುಟುಂಬ ಅಲ್ಲಿನ ಅತ್ಯಂತ ಶ್ರೀಮಂತ ಕಟುಂಬಗಳಲ್ಲಿ ಒಂದಾಗಿದೆ.