ಬೆಂಗಳೂರು: ನಾಲ್ಕು ತಿಂಗಳ ಬಳಿಕ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಇಂದು ಅಧಿಕೃತವಾಗಿ ಪದಗ್ರಹಣ ಮಾಡಿದರು. ನೂತನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಂದ ಪಕ್ಷದ ಬಾವುಟ ಸ್ವೀಕರಿಸುವ ಮೂಲಕ ಪದಗ್ರಹಣ ಮಾಡಿದರು.

ಡಿ.ಕೆ ಶಿವಕುಮಾರ್ ಜತೆಗೆ ಕೆಪಿಸಿಸಿ ಕಾರ್ಯಧ್ಯಕ್ಷರಾಗಿ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಂ ಅಹಮದ್ ಅಧಿಕಾರ ಸ್ವೀಕಾರ ಮಾಡಿದರು.
ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ಕೊರೊನಾ ಹಿನ್ನೆಲೆಯಲ್ಲಿ ಸಮಾರಂಭವನ್ನು ಕೇವಲ 150 ಮಂದಿ ಮಾತ್ರ ಪಾಲ್ಗೊಳ್ಳಲು ಅನುಮತಿ ನೀಡಲಾಗಿತ್ತು. ಹೀಗಾಗಿ ಕೆಲವೇ ಕೆಲವು ಹಿರಿಯ ನಾಯಕರು ಮಾತ್ರ ಪಾಲ್ಗೊಂಡಿದ್ದರು. ಸೀಮಿತ ನಾಯಕರಿಗೆ ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ಯಾವುದೇ ನೂಕುನುಗ್ಗಲು ಉಂಟಾಗದಂತೆ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾರ್ಯಕ್ರಮಕ್ಕೆ ಜಿಲ್ಲೆ ಹಾಗೂ ಬ್ಲಾಕ್ ಹಂತದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜ್ಯದ 10 ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಚೇರಿಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಹೀಗಾಗಿ ರಾಜ್ಯದ ವಿವಿಧೆಡೆಗಳಿಂದ 15 ಲಕ್ಷಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದ ನೇರ ವೀಕ್ಷಣೆ ಮಾಡಿದರು ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದರು.








