ಭಾರತದ ಜೊತೆಗಿನ ಸಂಬಂಧ ವೃದ್ಧಿಗೆ ಮೊದಲ ಆದ್ಯತೆ – ಜೋ ಬಿಡೆನ್
ವಾಷಿಂಗ್ಟನ್, ಜುಲೈ 2: ಅಮೆರಿಕಾದ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ಅಮೆರಿಕದ ಮಾಜಿ ಉಪಾಧ್ಯಕ್ಷ ಜೋ ಬಿಡೆನ್ ಅವರು ನವೆಂಬರ್ ಚುನಾವಣೆಯಲ್ಲಿ ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಭಾರತದ ಜೊತೆಗಿನ ಸಂಬಂಧ ವೃದ್ಧಿಗೆ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ವರ್ಚುವಲ್ ಫಂಡ್ ರೈಸರ್ ಈವೆಂಟ್‌ನಲ್ಲಿ ಭಾರತ-ಅಮೆರಿಕ ಸಂಬಂಧದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು,
ಭಾರತದೊಂದಿಗಿನ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ತಮ್ಮ ಆಡಳಿತವು ಕೆಲಸ ಮಾಡಲಿದೆ. ಅಮೆರಿಕ ಭದ್ರತೆಗಾಗಿ ಅಮೆರಿಕಾ-ಭಾರತ ಸಂಬಂಧಗಳನ್ನು ಬಲಪಡಿಸುವುದು “ಅಗತ್ಯ ಮತ್ತು ಪ್ರಮುಖ” ಎಂದು ಬಿಡೆನ್ ಈ ಸಂದರ್ಭದಲ್ಲಿ ಹೇಳಿದರು.
ನಮ್ಮ ಸುರಕ್ಷತೆಗಾಗಿ ಭಾರತವು ಈ ಪ್ರದೇಶದಲ್ಲಿ ಪಾಲುದಾರರಾಗಬೇಕು ಮತ್ತು ಅವರಿಗೂ ಇದು ಅಷ್ಟೇ ಪ್ರಮುಖವಾಗಿದೆ ಎಂದ ಬಿಡೆನ್ ಒಂದು ದಶಕದ ಹಿಂದೆ ಅಮೆರಿಕಾ-ಭಾರತ ನಾಗರಿಕ ಪರಮಾಣು ಒಪ್ಪಂದಕ್ಕೆ ಕಾಂಗ್ರೆಸ್ಸಿನ ಅನುಮೋದನೆ ಪಡೆಯುವಲ್ಲಿ ನಾನು ವಹಿಸಿದ್ದ ಪಾತ್ರದ ಬಗ್ಗೆ ಹೆಮ್ಮೆ ಇದ್ದು ಅದು ನಿಜಕ್ಕೂ ಮಹತ್ವದ ವಿಷಯವಾಗಿದೆ ಎಂದರು. ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ಭಾರತದೊಂದಿಗಿನ ನಮ್ಮ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸುವುದು ನಮ್ಮ ಮೊದಲ ಆದ್ಯತೆಯಾಗಲಿದೆ ಎಂದು ಬಿಡೆನ್ ಹೇಳಿದರು.

ಇದೇ ವೇಳೆ ಅಮೆರಿಕಾದಲ್ಲಿ ಕೋವಿಡ್ -19 ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ವಿಫಲತೆಯನ್ನು ಕಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಹರಿಹಾಯ್ದ ಬಿಡೆನ್, ಟ್ರಂಪ್ ಮೊದಲಿನಿಂದಲೂ ಎಚ್ಚರಿಕೆಗಳನ್ನು ಕಡೆಗಣಿಸಿದರು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ನಿರಾಕರಿಸಿದರು ಮತ್ತು ದೇಶವನ್ನು ರಕ್ಷಿಸುವಲ್ಲಿ ವಿಫಲರಾದರು. ಅಷ್ಟು ಮಾತ್ರವಲ್ಲದೆ ಅವರ ಅಧ್ಯಕ್ಷ ಸ್ಥಾನದುದ್ದಕ್ಕೂ, ನಮ್ಮ ಪ್ರಮುಖ ಆಧಾರ ಸ್ತಂಭಗಳನ್ನು ಹಾಳುಮಾಡಿದರು ಎಂದು ಹೇಳಿದರು.
ನಮ್ಮ ದೇಶವು ಉತ್ತಮ ನಾಯಕತ್ವದ ನಿರೀಕ್ಷೆಯಲ್ಲಿದ್ದು, ನಾನು ಅಧ್ಯಕ್ಷನಾಗಿ ಆಯ್ಕೆಯಾದರೆ ದೇಶವನ್ನು ಪುನರ್ನಿರ್ಮಾಣ ಮಾತ್ರವಲ್ಲ ಮೊದಲಿಗಿಂತ ಉತ್ತಮವಾಗಿ ನಿರ್ಮಿಸಲು ಬಯಸುತ್ತೇವೆ ಎಂದು ಬಿಡೆನ್ ಭರವಸೆ ನೀಡಿದರು.








