ಬೆಂಗಳೂರು : ಕಾಂಗ್ರೆಸ್ ಪಕ್ಷ ಯಾವತ್ತು ಅಧಿಕಾರಕ್ಕಾಗಿ ಹುಟ್ಟಿಕೊಂಡ ಪಕ್ಷವಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಪಕ್ಷ ಇದು ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷರು ಕಾರ್ಯಾಧ್ಯಕ್ಷರು ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ದೇಶದ ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಪಕ್ಷ. ಇಂದು ಪಕ್ಷಕ್ಕೆ ಒಂದಿಷ್ಟು ಹಿನ್ನಡೆ ಆಗಿರಬಹುದು ಆದರೆ ವ್ಯಾಪಕ ಮಟ್ಟದಲ್ಲಿ ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಎಂದರೆ ಇದೊಂದೇ. ಪಕ್ಷಕ್ಕೆ ಒಂದಿಷ್ಟು ಹಿನ್ನಡೆಯಾಗಿದೆ ಎಂದರೆ ಅದು ವೈಫಲ್ಯ ಎಂದು ಹೇಳಲಾಗದು ಎಂದರು.
ಈ ವೇಳೆ ಕಳೆದ ವಿಧಾನಸಭಾ ಚುನಾವಣೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಶೇಕಡಾವಾರು ಮತ ಗಳಿಕೆಯಲ್ಲಿ ನಾವು ಸಾಕಷ್ಟು ಉತ್ತಮ ಸ್ಥಿತಿಯಲ್ಲಿದ್ದೇವೆ. ದಿನದಿಂದ ದಿನಕ್ಕೆ ನಮಗೆ ಜನರ ಬೆಂಬಲ ಹೆಚ್ಚಾಗುತ್ತಿದೆ. ಆದರೆ ಶಾಸಕರ ಹಣದ ವಿಚಾರದಲ್ಲಿ ನಮಗೆ ಕೊರತೆ ಎದುರಾಗಿತ್ತು. ನಾವು ಸಾಕಷ್ಟು ಉತ್ತಮ ಕೆಲಸವನ್ನು ಮಾಡಿದ್ದೆವು. ಮಂತ್ರಿಮಂಡಲದ ಸದಸ್ಯರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರು. ಶೇಕಡ ನೂರರಷ್ಟು ಭರವಸೆಯನ್ನು ಈಡೇರಿಸಿದೆ ಸರ್ಕಾರ ನಮ್ಮದಾಗಿತ್ತು. ಆದರೂ ಅಪಪ್ರಚಾರದಿಂದ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ತಂತ್ರಗಾರಿಕೆಯಿಂದ ನಾವು ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ನಾವು ಅಂದು ಮಾಡಿರುವ ಕಾರ್ಯಕ್ರಮಗಳನ್ನು ಜನ ಇಂದು ನೆನೆಯುತ್ತಿದ್ದಾರೆ ಎಂದರು.
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಆಹಾರ ಭದ್ರತಾ ಕಾಯ್ದೆ ತಂದರು. ಉದ್ಯೋಗ ಕ್ರಾಂತಿ ಮಾಡಿದ್ದರು. ದೂರದೃಷ್ಟಿ ಇಟ್ಟುಕೊಂಡು ಇಂತಹ ಕಾರ್ಯಕ್ರಮ ತಂದಿದ್ದರಿಂದ ಇಂದು ಕೋವಿಡ್ ಆತಂಕದ ನಡುವೆಯೂ ಜನ ಸಮರ್ಥವಾಗಿ ಬದುಕಲು ಸಾಧ್ಯವಾಗಿದೆ ಎಂದು ಬಿಜೆಪಿಗೆ ತಿವಿದರು.
ಇದೊಂದು ವಿನೂತನ ಹಾಗೂ ವಿಶಿಷ್ಟ ಕಾರ್ಯಕ್ರಮ. ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು, 20 ಲಕ್ಷ ಕಾರ್ಯಕರ್ತರು ಈ ಕಾರ್ಯಕ್ರಮವನ್ನು ವೀಕ್ಷಿಸಿದ್ದಾರೆ. ಇಡೀ ರಾಜ್ಯಕ್ಕೆ ಒಂದು ಹೊಸ ಸಂದೇಶವನ್ನು ರವಾನೆ ಮಾಡಲಾಗಿದೆ. ಶಿವಕುಮಾರ ಅಧ್ಯಕ್ಷರಾಗಿ ನೇಮಕವಾಗಿ ನಾಲ್ಕು ತಿಂಗಳು ಕಳೆದಿದೆ. ಕೊರೊನಾ ಇದ್ದ ಕಾರಣ ಕಾರ್ಯಕ್ರಮ ನಡೆಯುವುದು ವಿಳಂಬವಾಗಿದೆ ಎಂದ ಸಿದ್ದರಾಮಯ್ಯ, ಸಾವಿರಾರು ಜನರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಲು ಸಾಧ್ಯವಾಗಿಲ್ಲ. ಮೂರು ಕಾರ್ಯಾಧ್ಯಕ್ಷರ ಜೊತೆ ಡಿಕೆ ಶಿವಕುಮಾರ್ ಅಧ್ಯಕ್ಷರಾಗಿ ಇಂದು ಪದಗ್ರಹಣ ಮಾಡಿದ್ದಾರೆ. ಇದನ್ನು ಪ್ರತಿಜ್ಞಾ ದಿನವಾಗಿ ನಾವೆಲ್ಲ ಆಚರಣೆ ಮಾಡಿದ್ದೇವೆ. ಮತ್ತೊಮ್ಮೆ ಸಂವಿಧಾನದ ಪೀಠಿಕೆಯನ್ನು ಪುನರುಚ್ಛಾರ ಮಾಡಿದ್ದೇವೆ. ಪಕ್ಷದ ತತ್ವ ಸಿದ್ಧಾಂತವನ್ನು ಪುನರುಚ್ಛಾರ ಮಾಡಿದ್ದೇವೆ. ಕಾರ್ಯಕರ್ತರಲ್ಲಿ ಹೊಸ ಹುರುಪನ್ನು ಮೂಡಿಸಲು ಪ್ರಯತ್ನ ನಡೆದಿದೆ. ಡಿಕೆಶಿ ನನ್ನ ಮಂತ್ರಿಮಂಡಲದಲ್ಲಿ ಕಾರ್ಯನಿರ್ವಹಿಸಿದವರು. ಕ್ರಿಯಾಶೀಲ ಹಾಗೂ ದಣಿವರಿಯದ ವ್ಯಕ್ತಿ. ಶಿವಕುಮಾರ್ ನೇತೃತ್ವದಲ್ಲಿ ಅವರ ಜೊತೆಗೂಡಿ ಕಾರ್ಯ ಅಧ್ಯಕ್ಷರು ಹಾಗೂ ಎಲ್ಲಾ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯವನ್ನು ಹಾಗೂ ಹೊಸರೂಪವನ್ನು ನೀಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.








